ಉಡುಪಿ: ಪಕ್ಷದ ಮೂಲದಿಂದ ಈಗಾಗಲೇ ಹಲವು ಬಾರಿ ಜನಾಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಕರ್ನಾಟಕದ ಮತದಾರರು ಬಿಜೆಪಿಯ ಆಡಳಿತದಿಂದ ರೋಸಿ ಹೋಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ.
ಪಕ್ಷದಿಂದ ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಯಾರಿಗೂ ಸ್ವರ್ಧೆಗೆ ಅವಕಾಶ ನೀಡಿದರೂ ಎಲ್ಲರೂ ಒಮ್ಮತದಿಂದ ತೊಡಗಿಸಿಕೊಳ್ಳಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳು ಹಾಗೂ ಮೈಸೂರು ವಿಭಾಗದ ಉಸ್ತುವಾರಿ ರೋಝಿ ಜಾನ್ ಹೇಳಿದರು. ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ವಿಧಾನಸಭಾ ಕ್ಷೇತ್ರವಾರು ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿಗಳಾದ ಧ್ರುವನಾರಾಯಣ ಮಾತನಾಡುತ್ತಾ, ರಾಜ್ಯದಲ್ಲಿ ಹಲವಾರು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು, ಸರಕಾರ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರಿಂದ ಸರಕಾರದ ಷಡ್ಯಂತ್ರ ಬಯಲುಗೊಂಡಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, ತನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡುವಲ್ಲಿ ವೈಫಲ್ಯ ಕಂಡ ಬಿಜೆಪಿ ಈಗ ಕ್ಷುಲಕ ವಿಷಯಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಪಕ್ಷದ ನಾಯಕರ ತೇಜೋವಧೆಗೆ ಹೊರಟಿದೆ. ಇಂತಹ ಕೆಟ್ಟ ಸರಕಾರ ಎಲ್ಲೂ ಕಾಣಸಿಗದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮಾತನಾಡುತ್ತಾ, ಎಲ್ಲಾ ಬೂತುಗಳಲ್ಲಿ ಬಿಎಲ್ಎ2 ಆಗುವಂತೆ ನಿಗಾವಹಿಸಬೇಕು. ಮತ್ತು ಎಲ್ಲಾ ವರ್ಗಗಳ ಮತ ಪಕ್ಷಕ್ಕೆ ಬರುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದರು.
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮಾತನಾಡುತ್ತಾ, ಯುಪಿಎ ಸರಕಾರದ ಅವಧಿಯಲ್ಲಿ ಅತ್ಯಲ್ಪ ಬೆಲೆ ಏರಿಕೆ ಪ್ರಕಟಗೊಂಡಾಗ ಬಿಜೆಪಿ ರಸ್ತೆಗಿಳಿದು ಪ್ರತಿಭಟಿಸುತ್ತಿತ್ತು. ಆದರೆ ಈಗ ಬೆಲೆ ಗಗನಕ್ಕೇರಿದರೂ ಅದು ಅಭಿವೃದ್ಧಿಗಾಗಿ ಎನ್ನುವ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರವಿದ್ದರೂ ರಾಜ್ಯ ಸರಕಾರ ಕೇಂದ್ರದಿಂದ ಅನುದಾನವನ್ನು ತರುವಲ್ಲಿ ವಿಫಲವಾಗಿದೆ ಎಂದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಎಮ್.ಎ.ಗಫೂರ್ ಹಾಗೂ ಮಿಥುನ್ ರೈ ಸಂಘಟನೆ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಶಂಕರ್ ಕುಂದರ್, ದೀಪಕ್ ಕೋಟ್ಯಾನ್, ಸೌರಭ ಬಲ್ಲಾಳ್, ರೋಶನ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಪ್ರಸಾದ್ ಕಾಂಚನ್, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಹರೀಶ್ ಕಿಣಿ, ಹಬೀಬ್ ಆಲಿ, ಮುರಲಿ ಶೆಟ್ಟಿ, ಕುಶಲ ಶೆಟ್ಟಿ, ಸಂತೋಷ್ ಕುಲಾಲ್, ಪ್ರಖ್ಯಾತ ಶೆಟ್ಟಿ, ಶಬ್ಬಿರ್ ಅಹ್ಮದ್, ಅಮೃತ್ ಶೆಣೈ, ಕೀರ್ತಿ ಶೆಟ್ಟಿ, ಮಾರ್ಮಡಿ ಸುಧಾಕರ ಶೆಟ್ಟಿ, ದಿವಾಕರ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಹಮೀದ್ ಯತೀಶ್ ಕರ್ಕೇರ, ವಿಜಯ ಪೂಜಾರಿ, ಶ್ರೀನಿವಾಸ ಹೆಬ್ಬಾರ್, ಉದ್ಯಾವರ ನಾಗೇಶ್ ಕುಮಾರ್, ಸಂಜಯ ಆಚಾರ್ಯ, ಸುರೇಶ್ ಶೆಟ್ಟಿ ಬನ್ನಂಜೆ, ಉಪೇಂದ್ರ, ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.
ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಹೇರೂರು ಸ್ವಾಗತಿಸಿ, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.