ಬೆಂಗಳೂರು: ತನ್ನ ತಾತನ ನೆನಪು ಆಗದಿದ್ದರೂ, ಟಿಪ್ಪು ತಾತನ ಹೆಸರು ನೆನಪಾಗುವ ಇನ್ನೊಂದು ಪಕ್ಷ ಇದೆ. ಚುನಾವಣಾ ಕಾಲ ಬಂದ ಕಾರಣ ಹೀಗೆ ಆಗುತ್ತಿದೆ. ಕೆಲವರಿಗೆ ಭಯೋತ್ಪಾದಕ ಚಟುವಟಿಕೆಯಲ್ಲೂ ಬುದ್ಧಿ ಸರಿ ಇಲ್ಲದ ಪ್ರಶ್ನೆ ಏಳುತ್ತದೆ. ಯಾಕೆಂದರೆ ಇದು ಚುನಾವಣೆ ಆರಂಭದ ಕಾಲ.
ಬಿಜೆಪಿ ಚುನಾವಣೆ ಕಾಲದ ಸಂಘಟನೆ ಅಲ್ಲ. ವರ್ಷದ 365 ದಿನಗಳೂ ನಾವು ಸಂಘಟಿತರಾಗಿ ಇರುತ್ತೇವೆ. ನಾವು ಉತ್ತಮ ಆಡಳಿತ ನೀಡಿದ್ದೇವೆ. ಆದ್ದರಿಂದ ನಾವು ಚುನಾವಣೆಗೆ ಕಣ್ಣೀರಿಲ್ಲದೆ ನಗು ನಗುತ್ತ ತಯಾರಾಗಿದ್ದೇವೆ ಎಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ತಿಳಿಸಿದರು.
ನಗರದ ಅರಮನೆ ಮೈದಾನದ ‘ಗಾಯತ್ರಿ ವಿಹಾರ’ದಲ್ಲಿ ಭಾನುವಾರ ರಾಜ್ಯ ಪ್ರಕೋಷ್ಠಗಳ ಸಮಾವೇಶ ‘ಶಕ್ತಿ ಸಂಗಮ’ದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಪ್ರಕೋಷ್ಠಗಳ ಮೊಟ್ಟ ಮೊದಲ ರಾಜ್ಯ ಸಮಾವೇಶ ಇದಾಗಿದೆ.
ರಾಜ್ಯಾಧ್ಯಕ್ಷರಿಂದ ಪೇಜ್ ಪ್ರಮುಖ್ ವರೆಗೆ ಎಲ್ಲ ವೃತ್ತಿಪರ ಪ್ರಕೋಷ್ಠಗಳನ್ನು ಜಾಗೃತಿಗೊಳಿಸುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ. ಚುನಾವಣೆ ಬಂತೆಂದರೆ ಒಂದೇ ಸಲ ಪಂಚರತ್ನ ಬರುತ್ತದೆ. ಪ್ರತಿ ಬಾರಿಯೂ ಇದು ಕೊನೆಯ ಚುನಾವಣೆ ಎಂಬ ಘೋಷಣೆ ಬರುತ್ತದೆ. ವೇದಿಕೆಯಲ್ಲಿ ಕಣ್ಣೀರು ಸುರಿಸಿ ಚುನಾವಣೆಗೆ ಹೋಗುತ್ತಿದ್ದಾರೆ, ಬೀದಿಗೆ ಬಂದಿದ್ದಾರೆ. ಅಪ್ಪನಿಂದ ಮಗನಿಗೆ, ತಾಯಿಯಿಂದ ಮಗನಿಗೆ ತ್ಯಾಗ ಮಾಡುತ್ತಾರೆ.
ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನದಲ್ಲೂ ಇದೇ ಮಾದರಿಯ ಸಮಾವೇಶಗಳನ್ನು ಬಿಜೆಪಿ ನಡೆಸಲಿದೆ. ಕಾರ್ಯಕರ್ತರ ಶಕ್ತಿ ಪರಿಚಯಕ್ಕಾಗಿ ಶಕ್ತಿ ಸಂಗಮ ಆಯೋಜಿಸಲಾಗಿದೆ. ಸಂಬಂಧಪಟ್ಟ ಪ್ರಕೋಷ್ಠದವರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ ಬಿಜೆಪಿಯ ಗೆಲುವಿನ ರಥವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜನಸಾಮಾನ್ಯರ ಪರವಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಮತ್ತು ಇಲ್ಲಿನ ಬಿಜೆಪಿ ಸರಕಾರಗಳು ಅತ್ಯುತ್ತಮವಾಗಿ ಕೆಲಸ ಮಾಡಿವೆ. ಅದನ್ನು ಜನರಿಗೆ ತಿಳಿಸುವ ಕಾರ್ಯ ನಡೆಯಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಗೆದ್ದರೆ ಅಭಿವೃದ್ಧಿಯ ವೇಗ ಹೆಚ್ಚಾಗಲು ಸಾಧ್ಯ.
ದತ್ತಪೀಠದ ವಿಚಾರದಲ್ಲಿ ತಾರ್ಕಿಕ ಅಂತ್ಯವನ್ನು ಕಾಣುವಲ್ಲಿ ಬಿಜೆಪಿ ಸರಕಾರದ ಪಾತ್ರವಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಬಿಜೆಪಿ ಸರಕಾರ ಪ್ರಮುಖ ಪಾತ್ರ ವಹಿಸಿದೆ. ದೇಶಾದ್ಯಂತ ಶಾಂತಿಯುತವಾಗಿ ಸುವ್ಯವಸ್ಥಿತವಾಗಿ ಕೋವಿಡ್ ಲಸಿಕೆ ಲಭಿಸಲು ಪ್ರಧಾನಿ ನರೇಂದ್ರ ಮೋದಿ ಕಾರಣ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶಕ್ತಿ ಸಂಗಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.