ಉಡುಪಿ: ಬಂಟರ ಯಾನೆ ನಾಡವರ ಸಂಘ ಸಾಣೂರು ಕಾರ್ಕಳ ತಾಲೂಕು ಉಡುಪಿ ಇದರ 7 ನೇ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಾಣೂರು ಶಿವರಾಮ್ ರೈ ಕಲಾ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಬಿ. ವಿಶ್ವನಾಥ ಶೆಟ್ಟಿ ಭಾಮಿನಿ ಏರ್ನಡ್ಕಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕಾರ್ಕಳ ತಾಲೂಕು ಸಂಚಾಲಕರಾದ ಬಿ. ಮಣಿರಾಜ್ ಶೆಟ್ಟಿ ನೆರವೇರಿಸಿದರು. ಸಮಾಜಕ್ಕೆ ನಾಯಕತ್ವದ ಗುಣವನ್ನು ಪಸರಿಸಿದ ಹೆಮ್ಮೆ ಬಂಟ ಸಮುದಾಯದ ಹೆಗ್ಗಳಿಕೆ ಎಂದರು.
ಮಂಗಳೂರು ವಯೋವೃದ್ಧ ನಿರ್ಗತಿಕರ ಮಹಿಳೆಯರ ಅನಾಥಶ್ರಮ ಸೇವಾಶ್ರಮದ ಟ್ರಸ್ಟಿ ಗೀತಾ ಆರ್. ಶೆಟ್ಟಿ ಗ್ರಾಮೀಣ ಪ್ರದೇಶದಲ್ಲಿ ಸಂಘ ಕಟ್ಟಿ ಬಂಟ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.
ನಮ್ಮ ಕುಡ್ಲ ನ್ಯೂಸ್ ಚಾನೆಲ್ ನ ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ಶೆಟ್ಟಿ ಮಾತನಾಡಿ, ಬಂಟ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಮತ್ತು ಇತರ ಸಮಾಜವನ್ನು ಕಡೆಗಣಿಸದೆ ಜಾತಿ ಸಂಘಟನೆಯನ್ನು ಬೆಳೆಸಿ ಸಮಾಜದಲ್ಲಿ ನಾಯಕತ್ವ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಗುಣ ಇತರರಿಗೆ ಮಾದರಿ ಎಂದರು.
ವೇದಿಕೆಯಲ್ಲಿ ಸಾಣೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಜಾತ ಶೆಟ್ಟಿ, ವಿಜಯ ಶೆಟ್ಟಿ ಪೊರ್ಲುಟ್ಟು ಗುತ್ತು ಸಾಣೂರು, ರಾಮಚಂದ್ರ ಶೆಟ್ಟಿ ಪಮ್ಮನಾಡಿ ಗುತ್ತು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪ್ರಸಾದ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೃತ್ಯ ಮತ್ತು ನಾಟಕ ಪ್ರದರ್ಶನ ನಡೆಯಿತು.