ಉಡುಪಿ: ಗೃಹ ರಕ್ಷಕದಳದ ಸಿಬ್ಬಂದಿಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವ-ಇಚ್ಚೆ ಹಾಗೂ ಪ್ರಾಮಾಣಿಕತೆಯಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ಎಂ ವಸಂತ ಕುಮಾರ್ ಹೇಳಿದರು.
ಅವರು ಶನಿವಾರ ಜಿಲ್ಲಾ ಗೃಹ ರಕ್ಷಕದಳ ಉಡುಪಿ ಇವರ ವತಿಯಿಂದ, ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ನಡೆದ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೃಹ ರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರ್.ಟಿ.ಓ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಯಾ ಇಲಾಖೆಗಳ ನಿಯಮಗಳಿಗೆ ಸಂಬಂಧಿಸಿದಂತೆ ಕೆಲಸಗಳಲ್ಲಿ ನೈಪುಣ್ಯತೆ ತೋರುತ್ತಿದ್ದು, ರಕ್ಷಣಾ ಕರೆಗಳು ಬಂದಂತಹ ಸಂದರ್ಭಗಳಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ಇವರಿಗೆ ಸಕಾಲದಲ್ಲಿ ಅಗತ್ಯ ಸವಲತ್ತುಗಳನ್ನು ನೀಡಿದಲ್ಲಿ ಇನ್ನೂ ಹೆಚ್ಚಿನ ಚೈತನ್ಯದಿಂದ ಕರ್ತವ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದರು.
ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ. ಕೆ.ಪ್ರಶಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವರದಿ ವಾಚಿಸಿದರು. ದ.ಕ ಮತ್ತು ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕಾಪು ನಿವೃತ್ತ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಕುಂದಾಪುರ ಘಟಕದ ನಿವೃತ್ತ ಪ್ಲಟೂನ್ ಸಾರ್ಜೆಂಟ್ ಕೆ.ಬಿ. ಶ್ರೀನಿವಾಸ್, ಕಾರ್ಕಳ ಘಟಕದ ಶ್ರೀಪ್ರಸಾದ್, ಶಿವಪ್ರಸಾದ್, ರಾಜೇಶ್ ಪೂಜಾರಿ ಹಾಗೂ ಸದಾನಂದ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಗೃಹರಕ್ಷಕದಳ ಕಚೇರಿ ಅಧಿಕ್ಷಕಿ ಕವಿತಾ ಕೆ.ಸಿ, ಜಿಲ್ಲೆಯ ವಿವಿಧ ಘಟಕದ ಘಟಕಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಗೃಹ ರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ ರಾಜೇಶ್ ಸ್ವಾಗತಿಸಿದರು.
ಉಡುಪಿ ಹೈಟೆಕ್ ಪ್ಯಾರಾ ಮೆಡಿಕಲ್ ಕಾಲೇಜಿನ ಮ್ಯಾನೇಜರ್ ಸಾಯಿನಾಥ್ ಉದ್ಯಾವರ ನಿರೂಪಿಸಿದರು. ಜಿಲ್ಲಾ ಗೃಹ ರಕ್ಷಕದಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ ವಂದಿಸಿದರು.