ಉಡುಪಿ: ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಂ. ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ “ಮಹೋತ್ಸವ-2022” ಒಂದನೇ ದಿನದ ಶಾಲಾ
ವಾರ್ಷಿಕೋತ್ಸವ ಸಮಾರಂಭವು ಬೈಂದೂರು ಶಾಸಕರು ಹಾಗೂ ಶಾಲಾ ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.
ಸಮಾರಂಭದಲ್ಲಿ ಎಸ್. ಎಸ್. ಎಲ್. ಸಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಸಕರು, ಸಾಧನೆಗೆ ಬಡತನ ಅಡ್ಡಿಯಲ್ಲ; ಸಾಧಿಸುವ
ಛಲವೊಂದಿದ್ದರೆ ಯಶಸ್ಸು ಶತಸಿದ್ಧ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ಹಲವಾರು ಋಣಾತ್ಮಕ ಅಂಶಗಳು ನಮ್ಮನ್ನು ಬಾಧಿಸಬಹುದು, ಅವುಗಳನ್ನು ಮೆಟ್ಟಿನಿಂತು ಮುಂದುವರಿದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಹುದು. ಅಂತಹ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಈ ಸಂಸ್ಥೆಯಲ್ಲಿ ಕಂಡುಬರುತ್ತಿದೆ ಎಂದರು.
ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪಪ್ರಾಂಶುಪಾಲೆ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್., ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲತಾ ಜಿ. ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಸಿಂಚನ ನಡೆಯಿತು.