ಶಿರ್ವ: ತನ್ನ ಹೆತ್ತವರ ಹೆಸರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಯಶ್‌ಪಾಲ್ ಸುವರ್ಣ, ತಮ್ಮ ಪುಷ್ಪಾನಂದ ಫೌಂಡೇಶನ್ ಮೂಲಕ ಕಾಪು ಕ್ಷೇತ್ರದ ೨೯ ಗ್ರಾಮಗಳ ಸುಮಾರು 1800 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಅಭಿನಂದನಾರ್ಹ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಪುಷ್ಪಾನಂದ ಫೌಂಡೇಶನ್ ವತಿಯಿಂದ ಶಿರ್ವ ಮಹಿಳಾ ಸೌಧದಲ್ಲಿ ಆಯೋಜಿಸಿದ್ದ ಕುರ್ಕಾಲು, ಶಿರ್ವ, ಮಜೂರು, ಮುದರಂಗಡಿ, ಇನ್ನಂಜೆ, ಮೂಡುಬೆಳ್ಳೆ ಹಾಗೂ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 200 ಮಂದಿ ವಿದ್ಯಾರ್ಥಿಗಳಿಗೆ ಸುಮಾರು 2.5 ಲಕ್ಷ ಮೌಲ್ಯದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಷ್ಪಾನಂದ ಫೌಂಡೇಶನ್ ಪ್ರವರ್ತಕರಾದ ಯಶ್‌ಪಾಲ್ ಎ. ಸುವರ್ಣ ಮಾತನಾಡಿ ತಮ್ಮ ತಾಯಿಯ ಆಶಯದಂತೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲು ತಮ್ಮ ಫೌಂಡೇಶನ್ ಮೂಲಕ ಪ್ರತಿಭಾ ಪುರಸ್ಕಾರ ವಿತರಿಸಲು ನಿರ್ಧರಿಸಿದ್ದು, ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 1800 ಮಂದಿ ವಿದ್ಯಾರ್ಥಿಗಳಿಗೆ ಸುಮಾರು 18 ಲಕ್ಷ ಮೌಲ್ಯದ ಧನಸಹಾಯ ನೀಡಲಾಗಿದೆ.
ತಂದೆ ತಾಯಿಯ ಸ್ಮರಣಾರ್ಥ ಪುಷ್ಪಾನಂದ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಕರಿಸುವ ಕಾರ್ಯ ನಿರಂತರವಾಗಿ ಮುಂದುವರೆಯಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಫೌಂಡೇಶನ್ ಮೂಲಕ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಆಶಯ ವ್ಯಕ್ತಪಡಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾದ ಶಿರ್ವ ಸಿ. ಎ. ಬ್ಯಾಂಕ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಕುತ್ಯಾರು, ಶಿರ್ವ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಬಬಿತಾ ಜೆ. ಅರಸ್ ಮಾತನಾಡಿದರು.
ಸಮಾರಂಭದಲ್ಲಿ ಸಮಾಜ ಸೇವಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುಮಾ ಶೆಟ್ಟಿ, ತಾ. ಪಂ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾಕರ ಪೂಜಾರಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗಿನಿ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರ್ಮಿಳಾ ಆಚಾರ್ಯ, ಕಾಪು ಬಿಜೆಪಿ ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಸಾಲ್ಯಾನ್, ಶಿರ್ವ ಅಯ್ಯಪ್ಪ ಭಕ್ತವೃಂದದ ಗೋಪಾಲ ಗುರುಸ್ವಾಮಿ ಉಪಸ್ಥಿತರಿದ್ದರು. ಯಶ್‌ಪಾಲ್ ಸುವರ್ಣ ಆಪ್ತ ಕಾರ್ಯದರ್ಶಿ ಮಟ್ಟು ಯತೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.