ಮಂಗಳೂರು: ನಗರದ ಕೆನರಾ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾಗಿದ್ದ ‘ಕೆನರಾ ಮ್ಯೂಸಿಯಂ’ ಪುನಶ್ಚೇತನ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ನೂತನವಾಗಿ ಸ್ಥಾಪಿಸಲಾದ ‘ಕನ್ಸರ್ವೇಷನ್ ಲ್ಯಾಬೊರೇಟರಿ’ಯ ಉದ್ಘಾಟನಾ ಕಾಯಕ್ರಮ ಶನಿವಾರ ನಡೆಯಿತು.
ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್‌ನ ಚಯರ್‌ಮ್ಯಾನ್ ಟಿ.ವಿ.ಮೋಹನ್‌ದಾಸ್ ಪೈ ಅವರು ನೂತನ ಪ್ರಯೋಗಾಲಯ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನವೇ ಕೆನರಾ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ದೇಶದ ಜನರಿಗೆ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವ ಆಶಯದಿಂದ ಶಾಲಾ ಕಾಲೇಜು ಆಗಿನ ಕಾಲದಲ್ಲಿ ಆರಂಭವಾಗಿದೆ.
ಕೆನರಾ ಸಂಸ್ಥೆ ನಡೆದು ಬಂದ ಹೆಜ್ಜೆಯನ್ನು ಹಾಗೂ ಹಿಂದಿನ ಕಾಲದ ನೆನಪು-ವಸ್ತುಗಳನ್ನು ಮ್ಯೂಸಿಯಂನಲ್ಲಿ ಸಂರಕ್ಷಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಜೀವಂತ ಚರಿತ್ರೆ ಅತೀ ಅಗತ್ಯ. ದೇಶದ ಅಮೂಲ್ಯ ವಸ್ತುಗಳನ್ನು ಮ್ಯೂಸಿಯಂನಲ್ಲಿ ಇಟ್ಟು ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಕೆನರಾ ಶಾಲೆಯ ಹುಟ್ಟು ಹಾಗೂ ನಡೆದುಬಂದ ಹೆಜ್ಜೆಗಳ ಕಥೆಗಳನ್ನು ಕೇಳಿ ವಿದ್ಯಾರ್ಥಿಗಳು ಪ್ರೇರೇಪಣೆ ಪಡೆಯುತ್ತಾರೆ ಎಂದರು.
ಪ್ರಮುಖರಾದ ರವೀಂದ್ರ ಪೈ, ಪ್ರದೀಪ್ ಜಿ.ಪೈ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ ಕಾಮತ್, ಕಾರ್ಯದರ್ಶಿ ರಂಗನಾಥ್ ಭಟ್, ಉಪಾಧ್ಯಕ್ಷ ಪದ್ಮನಾಭ ಪೈ ಹಾಗೂ ಕೆನರಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.