ಉಡುಪಿ: 2024ರ ಜ. 18ರಂದು ಸರ್ವಜ್ಞಪೀಠವೇರಿ ಚತುರ್ಥ ಬಾರಿಗೆ ದ್ವೈ ವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ‍್ಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಬಾಳೆ ಮುಹೂರ್ತ ಶುಕ್ರವಾರ ನಡೆಯಿತು.
ಪ್ರಾತಃಕಾಲ 7 ಗಂಟೆಗೆ ಶ್ರೀ ವೀರವಿಠಲ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಲಾಯಿತು. ಬಳಿಕ ಬಾಳೆ ಕಂದುಗಳು ಹಾಗೂ ತುಳಸಿ ಗಿಡಗಳ ಸಹಿತ ಪುತ್ತಿಗೆ ಮಠದಿಂದ ಮೆರವಣಿಗೆಯಲ್ಲಿ ಚಂದ್ರೇಶ್ವರ, ಅನಂತೇಶ್ವರ ದೇವರ ಸನ್ನಿಧಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಕನಕನ ಕಿಂಡಿ ಮೂಲಕ ಕೃಷ್ಣದರ್ಶನದ ಬಳಿಕ ಕೃಷ್ಣಮಠಕ್ಕೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥಿಸಿ ಸುಬ್ರಹ್ಮಣ್ಯ, ನವಗ್ರಹ, ವೃಂದಾವನ ಸಮುಚ್ಛಯಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮತ್ತೆ ಮೆರವಣಿಗೆ ಮೂಲಕ ಪುತ್ತಿಗೆ ಮಠದ ನಿವೇಶನದ ನಿಗದಿತ ಸ್ಥಳದಲ್ಲಿ ಬಾಳೆ ಮತ್ತು ತುಳಸಿ ಸಸಿಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನಡೆಸಲಾಯಿತು.
ಹೆರ್ಗ ವೇದವ್ಯಾಸ ಭಟ್, ಕೇಂಜ ಶ್ರೀಧರ ತಂತ್ರಿ, ರಾಘವೇಂದ್ರ ಕೊಡಂಚ ಧಾರ್ಮಿಕ ವಿಧಿ ವಿಧಾನ ನಡೆಸಿದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು. ಶ್ರೀ ಮಠದ ಪ್ರಸನ್ನಾಚಾರ್ಯ, ನಾಗರಾಜ ಆಚಾರ್ಯ, ರತೀಶ ತಂತ್ರಿ ಇದ್ದರು.
ಈ ಸಂದರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಕೆ. ಶ್ರೀಪತಿ ಭಟ್ ಮೂಡುಬಿದಿರೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ, ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕೊಲ್ಲೂರು ದೇವಳ ಟ್ರಸ್ಟಿ ಸಂಧ್ಯಾ, ವಿಜಯ ರಾಘವ ರಾವ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸುಧಾಕರ ಭಟ್, ತಾಲೂಕು ಅಧ್ಯಕ್ಷ ಮಂಜುನಾಥ ಉಪಾಧ್ಯ, ಅಂಡಾರು ದೇವಿಪ್ರಸಾದ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ಮೊದಲಾದವರಿದ್ದರು.
ಧರ್ಮಗ್ರಂಥಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಂಘಟನೆ ಮಾಡುವ ಆಶಯದೊಂದಿಗೆ ಗೀತಾ ಪ್ರಚಾರ ಕಾರ್ಯದಲ್ಲಿ ತೊಡಗಿರುವುದಾಗಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ನಡೆದ ಬಾಳೆ ಮುಹೂರ್ತ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಮ್ಮೆಲ್ಲಾ ಸಮಸ್ಯೆ, ಸಂದೇಹಗಳಿಗೆ ಗೀತೆಯಲ್ಲಿ ಉತ್ತರ ಇದೆ. ಗೀತಾ ಪಠಣದಿಂದ ಉದ್ವೇಗ ನಿವಾರಣೆಯಾಗುತ್ತದೆ. ಭಾರತದ ಭಗವದ್ಗೀತೆಯನ್ನು ಕೋಟಿ ಲೇಖನದ ಮೂಲಕ ವಿಶ್ವವ್ಯಾಪಿಯಾಗಿಸುವ ಸಂಕಲ್ಪ ತೊಡಲಾಗಿದೆ ಎಂದರು.
ಲೋಕ ಕಲ್ಯಾಣದ ಆಶಯದಿಂದ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಅಷ್ಟ ಯತಿಗಳನ್ನು ನಿಯೋಜಿಸಿದರು. ಬಾಲ ರೂಪಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಾಮನೆಗಳು ಪೂರ್ಣಗೊಳ್ಳುತ್ತದೆ. ನಾವು ಯಾವ ಭಾವದಿಂದ ಭಗವಂತನನ್ನು ಆರಾಧಿಸುತ್ತೇವೆಯೋ ಅದಕ್ಕೆ ಸರಿಯಾಗಿ ಫಲ ಲಭಿಸುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಂಸ್ಕೃತ ಕಾಲೇಜು ವಿಶ್ರಾಂತ ಪ್ರಾಚರ‍್ಯ ಹರಿದಾಸ ಉಪಾಧ್ಯಾಯ, ಕಿಶೋರ್ ರಾವ್, ಹರಿಕೃಷ್ಣ ಪುನರೂರು, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಐಕಳಭಾವ ದೇವಿಪ್ರಸಾದ ಶೆಟ್ಟಿ ಬೆಳಪು, ಪ್ರೊ,. ಎಂ. ಬಿ. ಪುರಾಣಿಕ್, ಪ್ರದೀಪ ಕುಮಾರ್ ಕಲ್ಕೂರ, ಪೊಲೀಸ್ ಅಧಿಕಾರಿಗಳಾದ ಪ್ರಮೋದ್ ಮತ್ತು ಮಂಜುನಾಥ್ ಇದ್ದರು.
ಸುಗುಣಮಾಲಾ ಸಂಪಾದಕ ಮಹಿತೋಷ ಆಚರ್ಯ ಸ್ವಾಗತಿಸಿ, ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ಗೋಪಾಲಾಚಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಕೆ. ವಿ. ರಮಣ್ ಮತ್ತು ಅಯನಾ ಸಿದ್ಧಪಡಿಸಿದ ಗೀತಾ ಪ್ರಚಾರದ ಮೊಬೈಲ್ ಸ್ವರಗೀತೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ನೆರೆದ ಸಾರ್ವಜನಿಕರಿಗೆ ಬಾಳೆ ಸಸಿ ವಿತರಿಸಲಾಯಿತು.