ಬೆಂಗಳೂರು: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ (ರಿ.) ಜತೆಗೆ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬೆಂಗಳೂರು ವಿಕಾಸಸೌಧದ ತಮ್ಮ ಕಛೇರಿಯಲ್ಲಿ ಸಭೆ ನಡೆಸಿದರು.
ಸೇವಾ ಭದ್ರತೆಯೊಂದಿಗೆ ವಾರ್ಷಿಕ ಶೇ.5ರಷ್ಟು ಗೌರವಧನ ಹೆಚ್ಚಳ, ನಿವೃತ್ತಿಯ ಸಂದರ್ಭದಲ್ಲಿ 25 ಲಕ್ಷ ರೂ.ಗಳ ಇಡಿಗಂಟು ಮತ್ತು ಕಾಯಂ ಉಪನ್ಯಾಸಕರಿಗೆ ನೀಡುವಂತೆ ತಮಗೂ ಓಓಡಿ ಹಾಗೂ ರಜೆ ಸೌಲಭ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ (ರಿ.) ಸಚಿವರಿಗೆ ಸಲ್ಲಿಸಿದೆ. ಸಮಿತಿಯ ಗೌರವಾಧ್ಯಕ್ಷ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಮನವಿಯನ್ನು ನೀಡಲಾಯಿತು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಶ್ಮಿ ವಿ. ಮಹೇಶ್, ಮುಖ್ಯ ಆಡಳಿತಾಧಿಕಾರಿ ರಂಜಿತ ಎಂ.ಪಿ., ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಶಿವಮೊಗ್ಗ, ಕಾರ್ಯಾಧ್ಯಕ್ಷರಾದ ಸಿ.ಕೆ. ಪಾಟೀಲ್, ಉಪಾಧ್ಯಕ್ಷರಾದ ಡಾ. ಹೇಮಲತಾ ಕೆ.ಎಚ್., ಡಾ. ಮಲ್ಲಿಕಾರ್ಜುನ್ ಎಂ.ಟಿ ತುಮಕೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಸಂಚಾಲಕ ಬಸನಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಪ್ರಭಾಕರ್, ಬೆಳಗಾವಿ ಜಿಲ್ಲಾಧ್ಯಕ್ಷ ನಿಂಗಪ್ಪ ಸಂಗ್ರೇಜಿ, ಸರ್ಜಾ ಶಂಕರ್ ಅರಳೀಮಠ್, ಹೇಮಚಂದ್ರ, ಮಂಜಣ್ಣ, ಡಾ. ಜಾವಗಲ್, ಎಸ್. ದಯಾನಂದ್ ಉಪಸ್ಥಿತರಿದ್ದರು.