ಮಂಗಳೂರು: ಇಂದಿನ ಜನಾಂಗ ಅಕ್ಷರ ಸಂಸ್ಕೃತಿಗಿಂತಲೂ ಪರದೆಯ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವುದರಿಂದ ಶಿಕ್ಷಕರು ಹೊಸತನವನ್ನು ಸ್ವೀಕರಿಸಬೇಕಾದ ಅನಿವಾರ‍್ಯತೆ ಇದೆ. ಆಧುನಿಕ ತಂತ್ರಜ್ಞಾನದೊಂದಿಗೆ ಅಕ್ಷರ ಸಂಸ್ಕೃತಿಯೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸದಿದ್ದರೆ ಭಾಷಾ ಪಠ್ಯದ ಸೂಕ್ಷ್ಮತೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದು ಕಷ್ಟಕರ ಎಂದು ನಿವೃತ್ತ ಕನ್ನಡ ಅಧ್ಯಾಪಕ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಹೇಳಿದರು.
ಅವರು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಕನ್ನಡ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘದ ಜಂಟಿ ಸಹಯೋಗದಲ್ಲಿ ರಥಬೀದಿ ಕಾಲೇಜಿನಲ್ಲಿ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ: ಕನ್ನಡ ಪಠ್ಯಗಳ ನಿರ್ವಹಣೆ’ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಕನ್ನಡ ಭಾಷಾಬೋಧನೆಯಲ್ಲಿ ನಿರ್ವಹಣೆಯ ಸವಾಲುಗಳ ಕುರಿತು ಮಾತನಾಡುತ್ತಿದ್ದರು.
ಪಠ್ಯಗಳಲ್ಲಿ ಪ್ರಾದೇಶಿಕತೆಗೆ ಹೆಚ್ಚು ಗಮನಹರಿಸಬೇಕಾಗಿದೆ. ಪಠ್ಯಗಳಿಗೆ ಕೃತಿಗಳನ್ನು ನೀಡಬೇಕಾದಾಗ, ಅರ್ಥ, ಟಿಪ್ಪಣಿಗಳನ್ನು ನೀಡಿದಾಗ ಅರ್ಥೈಸಬೇಕಾದರೆ ಪ್ರಾದೇಶಿಕ ಪಠ್ಯಗಳ ಅಗತ್ಯವಿದೆ. ಪ್ರಾದೇಶಿಕ ಪಠ್ಯಗಳು ವಿದ್ಯಾರ್ಥಿಗಳಿಗೆ ತಮ್ಮದೇ ಅನಿಸಿದಾಗ ಪಠ್ಯ ಆಪ್ತವಾಗುತ್ತದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪಠ್ಯಪುಸ್ತಕಗಳ ಪ್ರಧಾನ ಸಂಪಾದಕರೂ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಾ. ಸೋಮಣ್ಣ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯಗಳಲ್ಲಿ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವದ ವಿಕಸನಕ್ಕೆ ಆದ್ಯತೆ ನೀಡಲಾಗಿದೆ. ಜೀವನದ ಬೇರೆ ಬೇರೆ ಘಟ್ಟಗಳ ಬಹುರೂಪಗಳಂತಹ ಒಳ್ಳೆಯ ಅಂಶಗಳಿವೆ. ವಿದ್ಯಾರ್ಥಿಗಳ ಕೌಶಲ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ನಿವೃತ್ತ ಅಧ್ಯಾಪಕರಾದ ಡಾ. ನರಸಿಂಹಮೂರ್ತಿ ಅವರು ‘ಕನ್ನಡ ಭಾಷಾ ಪಠ್ಯಗಳ ನಿರ್ವಹಣೆ’ ಕುರಿತು, ‘ಕನ್ನಡ ಹೊಸಪಠ್ಯಗಳ ಆಶಯ’ ಕುರಿತು ಡಾ.ಮಾಧವ ಎಂ.ಕೆ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್ ಟಿ. ವಹಿಸಿದ್ದರು.
ವಿಕಾಸದ ಅಧ್ಯಕ್ಷರಾದ ಡಾ. ನಾಗವೇಣಿ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ರವಿಕುಮಾರ ಎಂ.ಪಿ. ವಂದಿಸಿದರು. ವಾಣಿ ಕೆ. ಕಾರ್ಯಕ್ರಮ ನಿರ್ವಹಿಸಿದರು. ವಿಕಾಸದ ಕಾರ್ಯದರ್ಶಿ ಹರೀಶ ಟಿ.ಜಿ., ಖಜಾಂಚಿ ಜ್ಯೋತಿಪ್ರಿಯಾ ಉಪಸ್ಥಿತರಿದ್ದರು.