ಅಸ್ಸಾಂ: ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ ನಡೆದಿದೆ. ಎರಡು ಶಾಲೆಗಳ ಒಟ್ಟು 50 ವಿದ್ಯಾರ್ಥಿಗಳು ಆರೋಗ್ಯ ಕಾರ್ಯಕರ್ತರು ನೀಡಿದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದ್ದು ಸೋನಾರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವಿದ್ಯಾರ್ಥಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅಸ್ಸಾಂ ರಾಜ್ಯದ ಬಟೌ ಉಪ ಕೇಂದ್ರದ ಆರೋಗ್ಯ ಕಾರ್ಯಕರ್ತರ ತಂಡವೊಂದು ಸ್ಥಳೀಯ ಕಿರಿಯ ಪ್ರಾಥಮಿಕ ಶಾಲೆ ಮತ್ತು ನಿಮಾಲಿಯಾ ಕಿರಿಯ ಪ್ರಾಥಮಿಕ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಐಎಫ್‌ಎ ಮಾತ್ರೆಗಳನ್ನು ಶಿಕ್ಷಕರ ಸಮ್ಮುಖದಲ್ಲಿ ನೀಡಿದ್ದರು. ಖಾಲಿ ಹೊಟ್ಟೆಯಲ್ಲಿ ಮಾತ್ರೆಗಳನ್ನು ಸೇವಿಸದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಕೆಲ ಹೊತ್ತಿನ ಬಳಿಕ ಉಭಯ ಶಾಲೆಗಳ ಸುಮಾರು ೫೦ ವಿದ್ಯಾರ್ಥಿಗಳಿಗೆ ವಾಂತಿಭೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಸೋನಾರಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಗ್ಗೆ ಗಮನಿಸಲಾಗಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.