ಮಂಗಳೂರು: ಅಂತರ್‌ರಾಷ್ಟ್ರೀಯ ಮಹಿಳೆಯರ ಮೇಲಿನ ಹಿಂಸೆಯ ನಿವಾರಣಾ ದಿನದ ಅಂಗವಾಗಿ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು, ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಿವಿನ ಜಾಥಾ ಮತ್ತು ಮಹಿಳಾ ಸಮಾವೇಶ ಮಂಗಳೂರಿನಲ್ಲಿ ನಡೆಯಿತು.
ಡೀಡ್ಸ್ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಅಧ್ಯಯನ ಕೇಂದ್ರ-ಮಂಗಳೂರು ವಿಶ್ವವಿದ್ಯಾನಿಲಯ, ಸಿಒಡಿಪಿ(ರಿ) ಮಂಗಳೂರು, ಜಮಾತೆ-ಇ- ಇಸ್ಲಾಮಿ ಹಿಂದ್ ಮಂಗಳೂರು, ಜನ ಶಿಕ್ಷಣ ಟ್ರಸ್ಟ್ ಮುಡಿಪು, ಮಂಗಳೂರು, ಪ್ರಜ್ನಾ ಕೌನ್ಸಿಲಿಂಗ್ ಸೆಂಟರ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ, ಶ್ರೀ ಪ್ರಶಾಂತಿ ಮಹಿಳಾ ಮಂಡಲ(ರಿ) ಸೋನಾಳಿಕೆ ಬಜಾಲ್, ಮಹಾಲಕ್ಷ್ಮಿ ಮಹಿಳಾ ಮಂಡಲ, ಮಾಡೂರು ಕೋಟೆಕಾರು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್ ಸೋಮೇಶ್ವರ, ಸಹೋದಯ ಮಂಗಳೂರು, ತರಿಕಿಟ ಕಲಾ ಕಮ್ಮಟ(ರಿ), ಜ್ಯೋತಿಗುಡ್ಡೆ ಬ್ರಹ್ಮರಕೂಟ್ಲು, ರೋಶನಿ ಸಮಾಜ ಸೇವಾ ಕಾಲೇಜು ಮಂಗಳೂರು, ಸೈಂಟ್ ಅಲೋಶಿಯಸ್ ಸಮಾಜ ಸೇವಾ ಕಾಲೇಜು, ಮಂಗಳೂರು, ಸೈಂಟ್ ಅಲೋಶಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೀರಿ, ಡಾ. ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಸಮಾಜ ಕಾರ್ಯ ವಿಭಾಗ, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ, ಇಂಡಿಯನ್ ಕಮ್ಯುನಿಟಿ ಆಕ್ಟಿವಿಸ್ಟ್ ನೆಟ್ ವರ್ಕ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮಂಗಳೂರು, ಸ್ನೇಹ ಸಂಜೀವಿನಿ ಒಕ್ಕೂಟ, ಮುನ್ನೂರು, ಉಳ್ಳಾಲ ನಗರ ಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ಕೊಣಾಜೆ ಗ್ರಾಮ ಪಂಚಾಯತ್, ತಲಪಾಡಿ ಗ್ರಾಮ ಪಂಚಾಯತ್, ಮುನ್ನೂರು ಗ್ರಾಮ ಪಂಚಾಯತ್, ಮುನ್ನೂರು, ಬೆಳ್ಮ ಗ್ರಾಮ ಪಂಚಾಯತ್, ಕುರ್ನಾಡು ಗ್ರಾಮ ಪಂಚಾಯತ್, ಸಹಭಾಗಿತ್ವದಲ್ಲಿ ಕಾರ್ಯಕ್ರಮವು ನಡೆಯಿತು.
9 ಪ್ರದೇಶಗಳಲ್ಲಿ ನಡೆದ ಪ್ರಚಾರಾಂದೋಲನದ ನಂತರ ತೊಕ್ಕೊಟ್ಟುವಿನ ಗಟ್ಟಿ ಸಮಾಜ ಭವನದಲ್ಲಿ ಜಾಥಾದ ಸಮಾರೋಪ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಟಿ ಪಾಪಾ ಬೋವಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸೆಯ ನಿವಾರಣೆಗೆ ಸಂಘಟಿತರಾಗೋಣ. ಸಮಾನತೆಯ-ಹಿಂಸಾರಹಿತ-ಸೌಹಾರ್ದಯುತ ಸಮಾಜ ನಮ್ಮದಾಗಲಿ ಎನ್ನುವ ಆಶಯ ವಾಕ್ಯವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆಯರ ಮೇಲಿನ ಹಿಂಸೆ ಜಾಸ್ತಿಯಾಗುತ್ತಿದ್ದು ಇಲಾಖೆಯು ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಸಾಂತ್ವನ, ಸಖಿ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಹಿಂಸೆಗೊಳಗಾದ ಮಹಿಳೆಯರು ನ್ಯಾಯವನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.
ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪ್ರತೀ 11 ನಿಮಿಷಗಳಿಗೊಮ್ಮೆ ಜಗತ್ತಿನಲ್ಲಿ ಸಂಗಾತಿಯಿಂದಲೇ ಮಹಿಳೆಯರ ಹತ್ಯೆ ನಡೆಯುತ್ತದೆ ಎಂಬ ಘೋರ ಸತ್ಯವನ್ನು ವಿಶ್ವಸಂಸ್ಥೆ ಈ ಅವಧಿಯಲ್ಲೇ ತೆರೆದಿಟ್ಟಿದೆ.
ಇದಕ್ಕೆ ಮುಖ್ಯವಾಗಿ ಲಿಂಗ ಅಸಮಾನತೆ ಮೂಲವಾಗಿದೆ. ಜತೆಗೆ ಲಿಂಗ ಸೂಕ್ಷ್ಮತೆಯ ಅರಿವು, ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳ ಜಾಗೃತಿ ಮತ್ತು ಸರಕಾರಿ ನ್ಯಾಯ ವ್ಯವಸ್ಥೆಗಳ ಮಾಹಿತಿಯ ಕೊರತೆಯೂ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಇವುಗಳ ಅರಿವನ್ನು ವ್ಯಕ್ತಿ-ಮನೆಗಳಿಗೆ ತಲುಪಿಸುವ ಉದ್ದೇಶದೊಂದಿಗೆ ಮುಡಿಪು, ಅಸೈಗೋಳಿ, ದೇರಳಕಟ್ಟೆ, ಕುತ್ತಾರು, ತೊಕ್ಕೊಟ್ಟು, ತಲಪಾಡಿ, ಕೋಟೆಕಾರು ಬೀರಿ, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಸ್ಥಳೀಯ ಸಂಘಸಂಸ್ಥೆಗಳು ಇಲಾಖೆಗಳ ಸಹಭಾಗಿತ್ವದಲ್ಲಿ ಪ್ರಚಾರಾಂದೋಲನವನ್ನು ನಡೆಸಲಾಗಿದೆ.
ಸರಕಾರ ಮತ್ತು ಸಂಬಂಧಿತ ಇಲಾಖೆ ಲಿಂಗ ಸಮಾನತೆ, ಮಹಿಳಾ ಕಾನೂನುಗಳು, ಹಿಂಸೆಗೊಳಗಾದ ಮಹಿಳೆಯರಿಗಿರುವ ನ್ಯಾಯ ವ್ಯವಸ್ಥೆಗಳ ನಿರಂತರ ಅರಿವನ್ನು ಜನಸಾಮಾನ್ಯರಿಂದ ಎಲ್ಲಾ ಇಲಾಖಾ ಅಧಿಕಾರಿಗಳು-ಸಿಬ್ಬಂದಿಗಳಿಗೆ ನಡೆಸುತ್ತಿರಬೇಕು. ಜತೆಗೆ ಮಹಿಳೆಯರಿಗಿರುವ ನ್ಯಾಯ ವ್ಯವಸ್ಥೆಗಳ ಸಾಕಷ್ಟು ಅನುದಾನವನ್ನು ನೀಡುತ್ತಿರಬೇಕು, ಯಾವುದೇ ಕಾರಣಕ್ಕೂ ಈ ಅನುದಾನಗಳನ್ನು ನೀಡದಿರುವುದು-ಸ್ಥಗಿತಗೊಳಿಸುವುದಕ್ಕೆ ಮುಂದಾಗಬಾರದು ಎನ್ನುವುದು ನಮ್ಮೆಲ್ಲರ ಬೇಡಿಕೆ ಎಂದರು.
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡ ಆಶಯ ಮಾತುಗಳನ್ನಾಡುತ್ತಾ, ನಮ್ಮ ಬಾಲ್ಯದಲ್ಲಿದ್ದ ವಿವಿಧ ಅವಕಾಶಗಳು ಮದುವೆಯಾದ ಮೇಲೆ ಹೆಚ್ಚಾಗಿ ಇಲ್ಲವಾಗಿದೆ.
ಮನೆ-ಮಕ್ಕಳ ಜವಾಬ್ದಾರಿಯೇ ಜಾಸ್ತಿಯಾಗಿದೆ. ಜತಗೆ ಹೆಣ್ಮಕ್ಕಳು ಮಹಿಳೆಯರ ಮೇಲೆ ಹಿಂಸೆಗಳೂ ಜಾಸ್ತಿಯಾಗುತ್ತಿವೆ. ಇದಕ್ಕಿರುವ ಕಾರಣಗಳ ಬಗ್ಗೆ ನಾವೆಲ್ಲರೂ ಚಿಂತಿಸಿ ಕಾರ್ಯಾಚರಿಸಬೇಕಾದ ಕಾಲ ಬಂದಿದೆ. ಉಳಿದ ವಿಷಯಗಳಿಗೆ ಸ್ಪಂದಿಸುವ ನಾವು, ಸಂಘಟನೆಗಳು, ಸರಕಾರ ಹೆಣ್ಮಕ್ಕಳ ಮೇಲಿನ ಹಿಂಸೆಗೆ ಸ್ಫಂದಿಸುತ್ತಿಲ್ಲ. ನಮ್ಮ ಗಂಡುಮಕ್ಕಳು ಪುರುಷರಿಗೂ ಅರಿವನ್ನು ನೀಡುವ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯತೆ ಒದಗಿಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ, ಪ್ರಜ್ನಾ ಕೌನ್ಸಿಲಿಂಗ್ ಸೆಂಟರ್ ನ ಪ್ರೊ.ಹಿಲ್ಡಾ ರಾಯಪ್ಪನ್, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಐರಿನ್ ವೇಗಸ್, ಸಖಿ ಕೇಂದ್ರದ ಪ್ರಿಯಾ, ಸಿಒಡಿಪಿ ನಿರ್ದೇಶಕ ಫಾದರ್ ವಿನ್ಸೆಂಟ್ ಡಿಸೋಜ, ಜಮಾತೆ-ಇ- ಇಸ್ಲಾಮಿ ಹಿಂದ್‌ನ ಸದಸ್ಯೆ ಸುಮಯ್ಯ ಹಮೀದುಲ್ಲಾ, ಮಹಾಲಕ್ಷ್ಮಿ ಮಹಿಳಾ ಮಂಡಲ, ಮಾಡೂರು ಕೋಟೆಕಾರಿನ ಕಲಾವತಿ ಉಪಸ್ಥಿತರಿದ್ದರು.
9 ಪ್ರದೇಶಗಳಲ್ಲಿ ನಡೆದ ಪ್ರಚಾರೋಂದಲನದಲ್ಲಿ ಒಟ್ಟು 8 ಸಾವಿರಕ್ಕೂ ಹೆಚ್ಚು ಲಿಂಗತ್ವ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಅಪರಾಧ(ಪೋಕ್ಸೊ), ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ ಮನೆ-ಅಂಗಡಿಗಳಿಗೆ ಕರಪತ್ರಗಳನ್ನು ಹಂಚಲಾಯಿತು. ಜತೆಗೆ ಮಹಿಳಾಪರ ಹಾಡುಗಳು, ಕಿರು ನಾಟಕಗಳನ್ನು ವಿದ್ಯಾರ್ಥಿಗಳು, ಸಂಸ್ಥೆಗಳು ಪ್ರದರ್ಶಿಸಿದರು. ಸಮಾವೇಶದಲ್ಲಿ 400ಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು.
ಡೀಡ್ಸ್ ನ ಕಾವ್ಯಶ್ರೀ ಆಶಯ ಗೀತೆ ಹಾಡಿದರು. ಜೆಸಿಂತಾ ಪಿರೇರಾ ಸ್ವಾಗತಿಸಿ, ಸಂಚಲನದ ಹರಿಣಿ ವಂದಿಸಿದರು. ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.