ಈಗ ತಾನೇ ಕರುನಾಡಿನ 2023ರ ಚುನಾವಣಾ ರಣರಂಗದ ಅಂಗಳ ಸ್ವಲ್ಪ ಚುರುಕಾಗಲು ಶುರುವಾಗಿದೆ ಅಷ್ಟೇ. ಜೇೂಡೊ ಯಾತ್ರೆ, ಜಾತಿ ಯಾತ್ರೆ ಒಂದೆಡೆಯಾದರೆ, ಮತ್ತೊಂದೆಡೆ ಸಂಕಲ್ಪ ಯಾತ್ರೆ ಮತ್ತೊಂದು ಕಡೆಯಿಂದ ಪಂಚ ರತ್ನ ಯಾತ್ರೆ. ಅಂತೂ ಈ ಮೂರು ಪಕ್ಷಗಳ ಕಡೆಯಿಂದಲೂ ಒಂದಲ್ಲ ಒಂದು ಯಾತ್ರೆ ಜಾತ್ರೆ ನಡೆಯುತ್ತಿದೆ.
ಈ ಎಲ್ಲದರ ನಡುವೆ ಯಾರು ಅಧಿಕಾರ ಹಿಡಿಯಬಹುದು ಅನ್ನುವುದು ಈ ಬಾರಿಯ ಅತೀ ದೊಡ್ಡ ಯಕ್ಷ ಪ್ರಶ್ನೆ?
ಮುಂದೆ ಈ ಬಾರಿ ಯಾರು ಅಧಿಕಾರ ಹಿಡಿಯಬಹುದು ಅನ್ನುವುದನ್ನು ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಸತ್ಯ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ನಡುವೆ ಹೆಚ್ಚಿನ ಸಂಖ್ಯೆಯ ಸೀಟುಗಳು ಹಂಚಿ ಹೇೂಗುವ ಸಾಧ್ಯತೆಗಳು ಮೇಲ್ನೋಟಕ್ಕೆ ನಿಷ್ಚಳವಾಗಿ ಗೇೂಚರಿಸುತ್ತಿದೆ. ಆಂತೂ ಇಬ್ಬರ ಜಗಳದಲ್ಲಿ ಯಾರನ್ನು ಹಿಡಿದು ಅಧಿಕಾರಕ್ಕೆ ಏರಬೇಕೆನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ಚಾತಕ ಪಕ್ಷಿಯಂತೆ ಕಾದು ಕೂತಿರುವುದಂತೂ ನಿಜ.
ಮತ್ತೊಮ್ಮೆ ಸಮಿಶ್ರದ ಅತಂತ್ರದ ಪರಿಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಸಿದ್ದರಾಮಯ್ಯನವರು ಇಲ್ಲದ ಕಾಂಗ್ರೆಸ್‌ನ್ನು ಅಧಿಕಾರ ಹಿಡಿಯಲು ಜೆಡಿಎಸ್ ಬಳಸಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ. ಇದು ಡಿಕೆಶಿಯವರಿಗೆ ಸಮಾಧಾನ ತರುವ ವರದಾನ. ಈ ಸಮೀಕರಣ ಕೆಲಸ ಮಾಡದೇ ಹೇೂದಲ್ಲಿ ಮತ್ತೆ ಬಿಜೆಪಿ ಕುಮಾರಸ್ವಾಮಿ ಅವರಿಗೆ ಗದ್ದುಗೆ ನೀಡಿ ಕೈ ತೊಳೆದುಕೊಂಡು ಯಡಿಯೂರಪ್ಪನವರು ತಮ್ಮ ಪ್ರಾಬಲ್ಯದ ಛಾಪು ಒತ್ತಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.
ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಯ ರಥ ಅವರ ಪ್ರಬಲ ಮತ ಬ್ಯಾಂಕಿನ ಕಡೆಗೆ ನಡೆದು ಹೇೂಗುತ್ತಿದೆ ಅನ್ನುವುದು ಅಷ್ಟೇ ಸತ್ಯ. ಅವರ ಗುರಿ ಕೇವಲ 25 ರಿಂದ 30 ಸ್ಥಾನಗಳು. ಇಷ್ಟೇ ಸಾಕು ಸದ್ಯದ ಪರಿಸ್ಥಿತಿಯಲ್ಲಿ ಅತಂತ್ರ ಎಸೆಂಬ್ಲಿ ಸೃಷ್ಟಿಸಲು ಅಲ್ವಾ?
ಬಿಜೆಪಿಗೆ ಮೇೂದಿ ಮತ್ತು ಹಿಂದುತ್ವದ ಅಲೆ. ಜೊತೆಗೆ ಸ್ವಲ್ಪ ಆಡಳಿತ ವಿರೇೂಧಿ ಅಲೆ. ಅದೇ ಕಾಂಗ್ರೆಸ್ಗೆ ಸ್ಥಳೀಯ ನಾಯಕರುಗಳ ಜಾತಿ ಅಹಿಂದದ ಪ್ರೀತಿ. ಹಾಗಾಗಿ ಈ ಬಾರಿ ಮತ ಹಂಚಿಕೆ ಕೂಡಾ 40% ರಿಂದ 42% ಬಿಜೆಪಿಗೆ ಆದರೆ ಸುಮಾರು 32% ರಿಂದ 35 ರಷ್ಟು ಕಾಂಗ್ರೆಸ್ಗೆ ಹೇೂಗುವ ಭವಿಷ್ಯದ ಸಮೀಕ್ಷೆಯ ಲೆಕ್ಕಾಚಾರ.
20% ರಿಂದ 22 ರಷ್ಟು ಜೆಡಿಎಸ್ ಪಾಲಿಗೆ ದಕ್ಕಬಹುದು. ಅಂತೂ ಕರ್ನಾಟಕದ 2023ರ ಚುನಾವಣಾ ಭವಿಷ್ಯ ನಿರ್ಧರಿಸುವ ಶಕ್ತಿ ಇರುವುದು ಜೆಡಿಎಸ್ ಗೆ ಅನ್ನುವುದು ಸದ್ಯಕ್ಕೆ ಕಾಣುವ ರಾಜ್ಯ ರಾಜಕಾರಣದ ಭವಿಷ್ಯ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ