ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೆಂಗಣ್ಣು ಕಾಯಿಲೆ ಹಾವಳಿ ಹೆಚ್ಚಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಅತ್ಯಂತ ಸುಲಭದಲ್ಲಿ ಹರಡುವ ಈ ಕಾಯಿಲೆ ಇದೀಗ ಕರಾವಳಿ ಜಿಲ್ಲೆಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಮದ್ರಾಸ್ ಐ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗುವುದು, ಕಣ್ಣು ಉದಿಕೊಳ್ಳುವುದು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.
ಸೋಂಕಿತ ಮಕ್ಕಳು ಶಾಲೆಗಳಿಗೆ ಹೋಗಬಾರದು ಅದೇ ರೀತಿ ಕಂಜಕ್ಟಿವಿಟಿಸ್ ಪೀಡಿತ ಉದ್ಯೋಗಿಗಳು ಕಚೇರಿಗೆ ಹೋಗಬಾರದು. ವೈದ್ಯರ ಪ್ರಕಾರ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಹಸಿರು ತರಕಾರಿಗಳು, ತಾಜಾ ಹಣ್ಣು ಹೆಚ್ಚಾಗಿ ಸೇವಿಸುವುದು, ಸರಿಯಾಗಿ ನಿದ್ರೆ ಮಾಡುವುದರಿಂದ ರೋಗದಿಂದ ದೂರವಾಗಬಹುದು.
ಈ ಕಾಯಿಲೆಯಿಂದ ದೂರವಿರಲು ಏನು ಮಾಡಬೇಕು?
* ವಾಹನ ಚಲಾಯಿಸುವಾಗ ಸನ್ ಗ್ಲಾಸ್ ಧರಿಸಬೇಕು
* ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ.
* ಸೋಂಕಿತ ಕಣ್ಣನ್ನು ಆಗಾಗ್ಗೆ ಮುಟ್ಟುವುದು ಉಜ್ಜಬಾರದು.
* ಸೋಂಕಿತರ ಕರವಸ್ತ್ರ, ದಿಂಬು, ಹಾಸಿಗೆ ಇತ್ಯಾದಿಗಳನ್ನು ಬಳಸುವುದನ್ನು ತಪ್ಪಿಸಬೇಕು.
* ಯಾವಾಗಲೂ ಕನ್ನಡಕ ಹಾಕಿಕೊಂಡಿರಿ.
* ಸೋಂಕಿತ ವ್ಯಕ್ತಿಯಿಂದ ದೂರವಿರಿ.
ಈ ರೋಗದ ಲಕ್ಷಣಗಳೇನು?
ಕಂಜಕ್ಟಿವಿಟಿಸ್ ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಹೊರಗಡೆ ಬರುವ ದ್ರವದ ಮೂಲಕವೇ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕಣ್ಣಿನಲ್ಲಿ ತುರಿಕೆ, ಸೋಂಕಿತ ಕಣ್ಣುಗಳು ಕೆಂಪಾಗುವುದು ಸೋಂಕಿನ ಸಾಮಾನ್ಯ ಲಕ್ಷಣ. ವೈದ್ಯರ ಚೀಟಿ ಇಲ್ಲದೆ ಯಾವುದೇ ಡ್ರಾಫ್ಸ್ ಅಥವಾ ಔಷಧ ಬಳಕೆಯನ್ನು ಮಾಡುವುದು ಬಹಳ ಅಪಾಯಕಾರಿ.