ಮಣಿಪಾಲ: ಶಿಕ್ಷಣ ಮತ್ತು ಸಂಶೋಧನೆಗೆ ಮಣಿಪಾಲದ ಮಾಹೆ ಕೊಡುಗೆ ಶ್ಲಾಘನೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಶುಕ್ರವಾರ ಮಣಿಪಾಲದ ಮಾಹೆ ವಿ.ವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2014 ರ ಅವಧಿಯಲ್ಲಿ ದೇಶಾದ್ಯಂತ 400-500 ಸ್ಟಾರ್ಟ್ ಅಪ್ ಗಳಿದ್ದವು. ಇದೀಗ ಸ್ಟಾರ್ಟ್ ಅಪ್ ಗಳ ಸಂಖ್ಯೆ 70,000 ದಾಟಿದೆ. ಇವುಗಳಲ್ಲಿ 100 ಯೂನಿಕಾರ್ನ್ ಗಳಾಗಿವೆ.
ಜಗತ್ತಿನಾದ್ಯಂತ ಪ್ರತಿಷ್ಠಿತ ಕಂಪನಿಗಳು ಬೆಳೆಯಲು ಭಾರತೀಯರ ಕೊಡುಗೆ ಇದೆ. ನಮ್ಮ ಯುವಜನರು ದೇಶದಲ್ಲೇ ಕಂಪನಿಗಳನ್ನು ಆರಂಭಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ನ್ಯೂ ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಯುವಶಕ್ತಿ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು.
ಪ್ರಾಚೀನ ಮತ್ತು ಆಧುನಿಕ ಜ್ಞಾನದ ಮಿಶ್ರಣವೇ ನೂತನ ಶಿಕ್ಷಣ ನೀತಿ. ಯುವಜನರನ್ನು ಜಾಗತಿಕ ಪ್ರಜೆಗಳಾಗಿ ರೂಪಿಸಲು ನೂತನ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸಲಿದೆ.
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಳೆದ ಐದು ವರ್ಷದಲ್ಲಿ ವಿಶ್ವದ ಬಲಿಷ್ಠ ಆರ್ಥಿಕ ದೇಶವಾಗಿ ಭಾರತ ಬೆಳೆಯುತ್ತಿದೆ. ಭಾರತ ಯಾರ ತಂಟೆಗೂ ಹೋಗಲ್ಲ. ನಮ್ಮ ತಂಟೆಗೆ ಬಂದರೆ ತಕ್ಕ ಉತ್ತರ ಕೊಡುತ್ತೇವೆ ಎಂದು ಶತ್ರು ರಾಷ್ಟ್ರಗಳಿಗೆ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದರು.