ಕುಂಜಿಬೆಟ್ಟು: ಚೈಲ್ಡ್ ಲೈನ್-1098, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು ಇಲ್ಲಿ ಆನ್ಲೈನ್ ಸುರಕ್ಷತೆಯ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಮಣಿಪಾಲ ಕೆ.ಎಮ್.ಸಿಯ ಫಾರೆನ್ಸಿಕ್ ಇಲಾಖೆಯ ಉಪನ್ಯಾಸಕರಾದ ಡಾ. ಅಶ್ವಿನಿ ಕುಮಾರ್, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಬಾರದು. ಸೈಬರ್ ಅಪರಾಧದಿಂದಾಗುವ ತೊಂದರೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ಆನ್ಲೈನ್ ಕ್ರೈಂ ಬಗ್ಗೆ ನಿಮಿಷದಲ್ಲೇ ದೂರು ನೀಡುವುದು ಹೇಗೆ ಎಂದು ತಿಳಿಸಿದರು.
ಅನಗತ್ಯವಾದ ಸಾಮಾಜಿಕ ಜಾಲತಾಣಗಳ ಕುರಿತಾದ ಚಟುವಟಿಕೆಗಳಿಂದ ದೂರವಿರುವಂತೆ ತಿಳಿಸಿದರು. ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕು ಎಂದು ಹೇಳಿದರು. ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು.
ಚೈಲ್ಡ್ಲೈನ್-1098 ಉಡುಪಿಯ ನಿರ್ದೆಶಕರಾದ ರಾಮಚಂದ್ರ ಉಪಾಧ್ಯಾಯ ಪ್ರಾಸ್ತವಿಕವಾಗಿ ಮಾತನಾಡಿದರು. ಚೈಲ್ಡ್ ಲೈನ್-1098 ಉಡುಪಿಯ ಆಪ್ತಸಮಾಲೋಚಕಿ ನಯನ ಚೈಲ್ಡ್ ಲೈನ್-1098 ರ ಬಗ್ಗೆ ಹಾಗೂ ಮಕ್ಕಳು ಯಾವ ಸಂದರ್ಭದಲ್ಲಿ ಚೈಲ್ಡ್ಲೈನ್-1098 ಗೆ ಕರೆ ಮಾಡಬೇಕು ಎಂದು ತಿಳಿಸಿದರು.
ಅಂರ್ತಜಾಲ ಸುರಕ್ಷತೆಯ ಕುರಿತು ಭಿತ್ತಿಪತ್ರ ರಚಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಚೈಲ್ಡ್ ಲೈನ್-1098 ಉಡುಪಿಯ ಸಹನಿರ್ದೆಶಕರಾದ ಗುರುರಾಜ್ ಭಟ್ ಮತ್ತು ಸುಹಾನಿ ಕಾಮತ್, ಚೈಲ್ಡ್ ಲೈನ್ ಕೇಂದ್ರ ಸಂಯೋಜಕರು, ಹಾಗೂ ಸಿಬ್ಬಂದಿಗಳು, ಮುಖ್ಯೋಪಾಧ್ಯಾಯರಾದ ವಿನೋದಾ ಶೆಟ್ಟಿ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ಮೋಹಿನಿ ಕಾರ್ಯಕ್ರಮವನ್ನು ನಿರೂಪಿಸಿ, ರೋಟರಿ ಉಡುಪಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕಾರಂತ್ ಸ್ವಾಗತಿಸಿ, ಚೈಲ್ಡ್ ಲೈನ್ ಸಿಬ್ಬಂದಿ ರೇಷ್ಮಾ ವಂದಿಸಿದರು.