ಉಡುಪಿ: ಕಾಂಗ್ರೆಸ್ ಪಕ್ಷದ ಎಲ್ಲಾ ಯೋಜನೆಗಳು ಹಿಂದುಳಿದ ವರ್ಗದ ಅಭಿವೃದ್ದಿಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಬ್ರಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಕೋಮು ದ್ವೇಷವನ್ನು ಹರಡಿದರೂ ಜನತೆ ಬುದ್ದಿವಂತರಾಗಿದ್ದು ಸಮಸ್ಯೆಗಳಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜ್ಯ ಹಿಂದುಳಿದ ಘಟಕದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿಯ ಸದಸ್ಯ ಮಧು ಬಂಗಾರಪ್ಪ ಹೇಳಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, ಶೀಘ್ರದಲ್ಲೇ ಮುಂಚೂಣಿ ಘಟಕಗಳ ಬ್ಲಾಕ್ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗುವುದು. ಜಿಲ್ಲೆಯಲ್ಲಿ 24 ಸಾವಿರ ಯುವ ಮತದಾರರಿದ್ದಾರೆ ಆದರೆ 13 ಸಾವಿರ ಮತದಾರರ ಸೇರ್ಪಡೆ ಇನ್ನಷ್ಟೆ ಆಗಬೇಕಿದೆ ಎಂದರು. ಎಲ್ಲಾ ಬ್ಲಾಕ್ ಗಳಿಗೆ ಮತದಾರರ ಕರಡು ಪ್ರತಿ ವಿತರಿಸಲಾಗುವುದು ಎಂದರು.
ಮಾಜಿ ಸಚಿವರೂ ಕೆಪಿಸಿಸಿ ಉಪಾಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಮಾತನಾಡುತ್ತಾ, ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅವಕಾಶ ಸಿಗಲಿದೆ. ಧರ್ಮ ಜಾತಿ ಹೆಸರಲ್ಲಿ ಬಿಜೆಪಿ ದೇಶವನ್ನು ವಿಭಜನೆ ಮಾಡಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿ ಜನರನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.
ರಾಜು ಪೂಜಾರಿ, ಶಿವಾಜಿ ಸುವರ್ಣ, ಗೀತಾ ವಾಗ್ಳೆ, ಇಸ್ಮಾಯಿಲ್ ಅತ್ರಾಡಿ, ಬಿ. ನರಸಿಂಹಮೂರ್ತಿ, ಬಿ. ಕುಶಲ್ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಕೀರ್ತಿ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಯ ಕುಮಾರ್, ಕಿಶೋರ್ ಕುಮಾರ್ ಎರ್ಮಾಳ್, ಶಂಕರ್ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಸುನಿಲ್ ಬಂಗೇರ್, ಪ್ರಶಾಂತ ಜತ್ನನ್ನ, ಹರೀಶ್ ಶೆಟ್ಟಿ ಪಾಂಗಾಳ, ಎಲ್ಲೂರು ಶಶಿಧರ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಶಶಿಧರ್, ಗಣೇಶ್ ನೆರ್ಗಿ, ಹಮೀದ್, ಸುಜಯ ಆಚಾರ್ಯ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿ, ಹಿಂದುಳಿದ ಘಟಕದ ಕುಶ ಮೂಲ್ಯ ವಂದಿಸಿದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.