ಕಾರ್ಕಳ: ಮತದಾನ ಮಾಡಿದ ಮತದಾರ ಮಾತ್ರ ಪರಿಪೂರ್ಣ ಪ್ರಜೆ ಅನ್ನಿಸಿಕೊಳ್ಳುತ್ತಾನೆ. ಸರ್ಕಾರದ ತಪ್ಪು ಸರಿಗಳನ್ನು ವಿಮರ್ಶಿಸುವ ನೈತಿಕ ಹಕ್ಕು ಅವನಿಗೆ ಮಾತ್ರ ಇದೆ. ಮತದಾನ ಮಾಡದೇ ಸರ್ಕಾರವನ್ನು ದೂರುವುದಾಗಲಿ, ಟೀಕಿಸುವುದಾಗಲಿ ಸರಿಯಾದ ಕ್ರಮವಲ್ಲ ಎಂದು ಅಂಕಣಕಾರ ರಾಜಕೀಯ ವಿಮರ್ಶಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಅರಿವು ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ವಿಶೇಷ ಉಪನ್ಯಾಸ ನೀಡಿದರು
ಮತದಾನ ಮಾಡಿದವನಿಗೆ ಮಾತ್ರ ಸರ್ಕಾರದ ಸವಲತ್ತುಗಳು ಸಿಗುವ ನೀತಿ ರೂಪಿಸಬೇಕಾದ ಅಗತ್ಯವಿದೆ. ಮತದಾನ ಮಾಡುವುದರಲ್ಲಿ ನಗರ ಮತದಾರರಿಗ್ಗಿಂತ ಗ್ರಾಮೀಣ ಮತದಾರರೇ ಸಾಕಷ್ಟು ಮುಂದೆ ಇದ್ದಾರೆ. ಶ್ರೀಮಂತರಿಗಿಂತ ಬಡವರೇ ಮುಂದಿದ್ದಾರೆ. ವಿದ್ಯಾವಂತರಿಗ್ಗಿಂತ ಅವಿದ್ಯಾವಂತರೆ ಮುಂದೆ ಇದ್ದಾರೆ ಅನ್ನುವಾಗ ಈ ದೇಶದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಜವಾಬ್ದಾರಿತನ ತೇೂರಿಸುತ್ತಿರುವವರು ಯಾರು ಅನ್ನುವುದನ್ನು ಮತ್ತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಮುಂದಿನ ಚುನಾವಣೆಗಳಲ್ಲಿ ಈ ಮತದಾನದ ಪ್ರಮಾಣ ಕನಿಷ್ಠ ಪಕ್ಷ ಶೇ.80ರ ಗಡಿ ದಾಟಿಸುವ ಜವಾಬ್ದಾರಿ ನಮ್ಮ ಯುವ ಮತದಾರರ ಮೇಲಿದೆ. ಮತದಾನ ಮಾಡುವಾಗ ಅಭ್ಯರ್ಥಿಗಳ ಸಾಧನೆ, ಪ್ರಾಮಾಣಿಕತೆ, ಶಿಸ್ತು ಜನಹಿತ ಕಾಳಜಿ ಹೊಂದಿದ್ದವರನ್ನೆ ಚುನಾಯಿಸಬೇಕೇ ಹೊರತು ಭ್ರಷ್ಟರು, ಪುಂಡರು, ಅವಿವೇಕಿಗಳನ್ನು ಸಾರಸಗಟವಾಗಿ ತಿರಸ್ಕರಿಸಬೇಕಾದ ಹೊಣೆ ಯುವ ಮತದಾರರಿಗಿದೆ.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೇೂಟ್ಯಾನ್ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾಲಿನಿ ಜೈನ್, ವಿದ್ಯಾರ್ಥಿ ಪ್ರತಿನಿಧಿ ವಿಕಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಜೊತೆ ಪ್ರಶ್ನೇೂತ್ತರ ಕಾರ್ಯಕ್ರಮ ಜರುಗಿತು.