ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ರೋವರ್-ರೇಂಜರ್ ಘಟಕದ ಚಟುವಟಿಕೆಗಳ ಉದ್ಘಾಟನೆ ಹಾಗೂ ಸ್ಕೌಟ್ ಕೌಶಲಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ 2022-23ನೇ ಸಾಲಿನ ರೋವರ್-ರೇಂಜರ್ ಚಟುವಟಿಕೆಗಳನ್ನು ಉದ್ಘಾಟಿಸಿದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಇದರ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಸುಮನ್ ಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ತರಬೇತಿ ಆಯುಕ್ತರಾದ ಆನಂದ ಅಡಿಗ ಅವರು ಮಾತನಾಡುತ್ತಾ ಉತ್ತಮ ಸಮಾಜದ ನಿರ್ಮಾಣದಲ್ಲಿ ಸ್ಕೌಟ್ ತರಬೇತಿಯ ಪಾತ್ರ ಮಹತ್ವದ್ದಾಗಿದೆ. ಪ್ರಪಂಚದ ಅತೀ ದೊಡ್ಡ ಸಮವಸ್ತ್ರ ಹೊಂದಿರುವ ಸಂಘಟನೆಯಾಗಿರುವ ಸ್ಕೌಟ್ ಮತ್ತು ಗೈಡ್ಸ್ ಶತಮಾನದಿಂದ ಯುವಜನರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದೆ.
ಸ್ಕೌಟ್ ಕೌಶಲಗಳು ಹಾಗೂ ಶಿಸ್ತುಬದ್ಧ ನಡವಳಿಕೆಗಳ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಡಾ. ಉದಯ ಶೆಟ್ಟಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಹಾಗೂ ರೇಂಜರ್ ಲೀಡರ್ ಡಾ. ಆಶಾ ಸಿ. ಇಂಗಳಗಿ ಉಪಸ್ಥಿತರಿದ್ದರು. ಬಿ.ಬಿ.ಎ. ವಿದ್ಯಾರ್ಥಿ ನಿತೀಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಕರ ಸ್ವಾಗತಿಸಿ, ಸಚ್ಚೀ ಎಸ್. ಸುವರ್ಣ ವಂದಿಸಿದರು.