ಕುಂದಾಪುರ: ಸಮಾಜದ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವುದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿಯ ಸಂಸ್ಕಾರ ಎನ್ನುವುದು ಅವನ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಯುವ ಬರಹಗಾರ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ವೆಂಕಟೇಶ ಕೃಪಾ ಟ್ರೇಡರ್ಸ್ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ ವಿಶೇಷ ಕೊಡುಗೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಗಳನ್ನು ಮಾಡಿದವರನ್ನು ಗುರುತಿಸುವುದರ ಜೊತೆಯಲ್ಲಿ ನಮ್ಮ ನಡುವೆಯೇ ಇರುವಂತಹ ಶ್ರಮಿಕ ವರ್ಗದವರ ನಿರಂತರ ಪರಿಶ್ರಮವನ್ನು ಸೇವೆಯನ್ನು ಗುರುತಿಸಿ ಗೌರವಿಸುವುದು. ದೈವಿಕವಾದ ಕೆಲಸ, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಉಮೇಶ್ ಕರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗುಜ್ಜಾಡಿ ನಾಯಕವಾಡಿ ಮತ್ತು ತ್ರಾಸಿ ವಿಭಾಗದ ಪೋಸ್ಟ್ ಮ್ಯಾನ್ ಗಳಾದ ಶ್ವೇತಾ, ಶಶಿಕಲಾ, ಪಾಂಡುರಂಗ, ಅಣ್ಣಪ್ಪ, ರಾಜೇಶ್ ಮತ್ತು ಬಾಬಣ್ಣ ಅವರ ಸೇವೆಯನ್ನು ಅಭಿನಂದಿಸಿ ಗೌರವಿಸಲಾಯಿತು.
ವೆಂಕಟೇಶ ಕೃಪಾ ಟ್ರೇಡರ್ಸ್, ಸುರಭಿ ಡಿಜಿಟಲ್ ಸ್ಟುಡಿಯೋ ಗಂಗೊಳ್ಳಿಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಜೀವನ ಕಥನ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅದೃಷ್ಟ ಚೀಟಿಯನ್ನು ಎತ್ತುವುದರ ಮೂಲಕ ಒಟ್ಟು 102 ಗ್ರಾಹಕರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು.
ಉಮೇಶ್ ಕರ್ಣಿಕ್, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಕೃಷ್ಣ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ವೆಂಕಟೇಶ್ ಕೃಪಾ ಟ್ರೇಡರ್ಸ್ ನ ಮಾಲೀಕರಾದ ಭಾಷ್ಕರ್ ಶೆಣೈ ಮತ್ತು ಜಯಶ್ರೀ ಶೆಣೈ ದಂಪತಿ, ಸುರಭಿ ಸ್ಟುಡಿಯೋ ಮಾಲೀಕ ಕೃಷ್ಣ ಖಾರ್ವಿ, ವಿಜಯ ಶೆಣೈ ಉಪಸ್ಥಿತರಿದ್ದರು. ವೆಂಕಟೇಶ್ ಶೆಣೈ ಪ್ರಸ್ತಾವಿಕ ನುಡಿಗಳನ್ನಾಡಿದರು. ವಜ್ರೇಶ್ ಶೆಣೈ ಸ್ವಾಗತಿಸಿ, ವರ್ಷಾ ಶೆಣೈ ವಂದಿಸಿದರು. ವಿಠ್ಠಲ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.