ರಾಜ್ಯದಲ್ಲಿ ನಡೆಯಲಿರುವ 2023ರ ಚುನಾವಣಾ ತಯಾರಿಯ ಮೊದಲ ಹೆಜ್ಜೆ ಜನಸಂಕಲ್ಪ ಯಾತ್ರೆ ಅನ್ನುವುದು ಸ್ವಷ್ಟವಾಗಿಯೇ ಬಿಂಬಿತವಾಗಿದೆ. ಸರ್ವ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ಪಕ್ಷದ ಸಾಮರ್ಥ್ಯ ಹಾಗೂ ಜನಬೆಂಬಲ ಗಳಿಕೆಯ ಪ್ರಯತ್ನವಾಗಿ ಯಾತ್ರೆ ಜಾತ್ರೆಗಳ ತಯಾರಿಕೆಯಲ್ಲಿ ಮುಂದಾಗಿದ್ದಾವೆ ಅನ್ನುವುದು ಅಷ್ಟೇ ಸತ್ಯ.
ಆಡಳಿತರೂಢ ಬಿಜೆಪಿ ತಾನು ಗಳಿಸಿಕೊಂಡ ಅಧಿಕಾರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಚುನಾವಣಾ ಪೂರ್ವಭಾವಿಯಾಗಿ ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆಯ ರಥವನ್ನು ಪಕ್ಷದ ಜನ ನಾಯಕರಾದ ಯಡಿಯೂರಪ್ಪ ನವರು ಏರಿದರೆ ಸಾರಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ರಥವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಜನ ಸಂಕಲ್ಪ ಯಾತ್ರೆಯ ರಥ ಉಡುಪಿ ಜಿಲ್ಲೆಯನ್ನು ಹಾದು ಹೇೂಗಿದೆ. ಹಾದು ಹೇೂದ ದಾರಿಯಲ್ಲಿಯೂ ಒಂದು ವಿಶೇಷತೆ ಇದೆ. ಇದು ಮುಂದಿನ ಚುನಾವಣಾ ಲೆಕ್ಕಾಚಾರಕ್ಕೆ ಸಿಗುವ ಸುಲಭದ ಲೆಕ್ಕಾಚಾರದ ವಿಶ್ಲೇಷಣೆಯೂ ಹೌದು.
ಈಗಾಗಲೇ ಬಿಜೆಪಿ ತನ್ನ ಸೇೂಲು ಗೆಲುವಿನ ಲೆಕ್ಕಾಚಾರವನ್ನು ರಾಷ್ಟ್ರಮಟ್ಟದ ಹೈಕಮಾಂಡಿಗೆ ವರದಿ ಮಾಡಿದೆ ಅನ್ನುವ ಸುದ್ದಿ ಕೂಡಾ ಇದೆ. ಅದೇ ರೀತಿಯಲ್ಲಿ ವಿವಿಧ ಮಾಧ್ಯಮಗಳು ಕೂಡಾ 224 ಕ್ಷೇತ್ರಗಳ ಲೆಕ್ಕಾಚಾರದ ಸಮೀಕ್ಷೆಯನ್ನು ಜಾಹೀರು ಪಡಿಸಿದ್ದಾವೆ.
ಈ ಸುದ್ದಿ ಮಾಧ್ಯಮಗಳಲ್ಲಿ ನಾನು ಕೂಡ ವಿಶ್ಲೇಷಕನಾಗಿ ಭಾಗವಹಿಸಿದ್ದೇನೆ. ಈ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿಗೆ ಉಡುಪಿ ಜಿಲ್ಲೆಯ ಪಂಚ ವಿಧಾನ ಸಭೆಯ ಕ್ಷೇತ್ರಗಳಲ್ಲಿ ದೊಡ್ಡ ಸವಾಲಿನ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳು ಮಾತ್ರ ಗೆಲುವಿಗೆ ಪ್ರಶ್ನಾರ್ಥವಾಗಿ ಕಾಡುತ್ತಿರುವುದೆಂದರೆ ಉಡುಪಿ ಜಿಲ್ಲೆಯ ದಕ್ಷಿಣ ಮತ್ತು ಉತ್ತರ ದ್ರುವ ಕ್ಷೇತ್ರಗಳಾದ ಕಾಪು ಮತ್ತು ಬೈಂದೂರು. ಇದನ್ನೇ ಮನಗಂಡ ಬಿಜೆಪಿ ತನ್ನ ಜನ ಸಂಕಲ್ಪ ಯಾತ್ರೆಯ ರಥವನ್ನು ಈ ಎರಡು ಪವಿತ್ರ ಸ್ಥಳಗಳಲ್ಲಿ ನಿಲ್ಲಿಸಿ ಜನಾಶೀರ್ವಾದ ಬೇಡಿಕೊಂಡು ಮುಂದೆ ಸಾಗಿದೆ ಅನ್ನುವುದು ಚುನಾವಣಾ ವಿಶ್ಲೇಷಣೆಗೆ ಸಿಗುವ ಮೊದಲ ಮಾಹಿತಿ.
ಅದಕ್ಕಾಗಿಯೇ ಜನಸಂಕಲ್ಪ ರಥ ಕಾರ್ಕಳದ ಕಡೆಗೂ ಸುಳಿಯಲಿಲ್ಲ. ಉಡುಪಿಯಲ್ಲೂ ನಿಲ್ಲಿಲಿಲ್ಲ, ಮಾತ್ರವಲ್ಲ ಕುಂದಾಪುರ ಕ್ಷೇತ್ರವನ್ನು ದಾಟಿ ಬೈಂದೂರಿನ ಪವಿತ್ರ ತಾಣದಲ್ಲಿ ಜನಾಶೀರ್ವಾದ ಪಡೆದು ಮುಂದೆ ಸಾಗಿದೆ ಅನ್ನುವುದು ಕೂಡ ಅಷ್ಟೇ ಮುಖ್ಯ. ಒಟ್ಟಿನಲ್ಲಿ ಈ ಎರಡು ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಗಳಿಗೆ ಮತ್ತೆ ಬಡಿತೆಬ್ಬಿಸುವ ಕೆಲಸವನ್ನು ಉಡುಪಿ ಜಿಲ್ಲೆಯ ಚುನಾವಣಾ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಮಾಡಿರುವುದಂತೂ ಸದ್ಯದ ರಾಜಕೀಯ ಬೆಳವಣಿಗೆಯೂ ಹೌದು.
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ