ಬ್ರಹ್ಮಾವರ: ಒಂದು ಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿ ವೈಭವದಿಂದ ಮೆರೆದು ಭಾರತದ ಭವ್ಯ ಪರಂಪರೆಯಲ್ಲಿ ವಿಜ್ರಂಭಿಸಿದ ಬಾರಕೂರು, ತುಳುನಾಡಿನ ಜನರ ನೆನಪಿನ ಪುಟಗಳಲ್ಲಿ ಇನ್ನೂ ಹಚ್ಚ ಹಸಿರಾಗಿ ಗೌರವಿಸಲ್ಪಡುತಿದೆ ಎಂಬುದನ್ನು ತಿಳಿಸುವ ಹಾಗೂ ತುಳುನಾಡಿನ ರಾಜ ಮಹಾರಾಜರು ಉಪಯೋಗಿಸಿದ ತುಳು ಲಿಪಿಯನ್ನು ಮತ್ತೆ ತುಳುನಾಡಿನಾದ್ಯಂತ ತುಳುವರ ಮನೆ ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಜೈ ತುಲುನಾಡ್(ರಿ) ಸಂಘಟನೆಯ ವತಿಯಿಂದ ಹಮ್ಮಿಕೊಂಡಂತಹ ‘ತುಲುನಾಡ ಐತಿಹಾಸಿಕ ರಾಜಧಾನಿ ಬಾರಕೂರುಡು ತುಲು ಲಿಪಿ ಸಿಂಗಾರ’ಎಂಬ ವಿಭಿನ್ನ ಕಾರ್ಯಕ್ರಮವನ್ನು ಬಾರಕೂರಿನ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ತುಳು ಲಿಪಿ ನಾಮಫಲಕವನ್ನು ಇರಿಸಲಾಯಿತು ಹಾಗೂ ಪ್ರಹ್ಲಾದ್ ತಂತ್ರಿಯವರು ಅಭಿವೃದ್ಧಿಪಡಿಸಿದ “ಅಲ್ಲಿಗೆ” ತುಳು ಲಿಪಿ ಫಾಂಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮೊದಲಿಗೆ ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್(ರಿ) ಸಂಘಟನೆ ಅಧ್ಯಕ್ಷರಾದ ಅಶ್ವಥ್ ತುಲುವ ವಹಿಸಿದ್ದರು. ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತರಾಮ ಶೆಟ್ಟಿ ಉದ್ಘಾಟನೆಯನ್ನು ನೆರವೇರಿಸಿದರು. ಬಾರಕೂರು ತುಳುರಾಜ್ಯದ ರಾಜಧಾನಿ ಆಗಿದಕ್ಕೆ 800 ವರ್ಷಗಳಿಗಿಂತಲೂ ಅಧಿಕ ಹಿಂದಿನ ಇತಿಹಾಸ ಇದೆ ಎಂಬುದಕ್ಕೆ ಬಹಳಷ್ಟು ದಾಖಲೆಗಳು, ಶಿಲಾ ಶಾಸನಗಳು ಬಾರಕೂರಿನಲ್ಲಿರುವ ಅಳಿದುಳಿದ ಒಂದೊಂದು ಕಲ್ಲುಗಳು ಕತೆ ಹೇಳುತಿದೆ.
ಇದನ್ನು ಉಳಿಸುವ ಜವಾಬ್ದಾರಿಯು ನಮ್ಮೆಲ್ಲರದ್ದಾಗಿದ್ದು ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜೈ ತುಲುನಾಡ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು. ತಾನು ಒಬ್ಬ ಕನ್ನಡ ಭಾಷಿಗನಾಗಿದ್ದು ತುಳುನಾಡಿನ ಕಂಬಳ ಹಾಗೂ ಕಂಬಳ ಕೋಣಗಳು ನನ್ನನ್ನು ತುಳು ಮಾತಾಡುವಂತೆ ಮಾಡಿದವು ಎನ್ನಲು ನನಗೆ ಹೆಮ್ಮೆಯಾಗುತ್ತದೆ ಎಂದರು.
ಗೌರವಾನ್ವಿತ ಅಥಿತಿಯಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು ಮುಖ್ಯಸ್ಥರಾದ ಮಂಜುನಾಥ್ ರಾವ್, ಮಾತನಾಡಿ ಅಂದೊಂದು ದಿನ ವೈಭವದಲ್ಲಿ ಮೆರೆದ ಬಾರಕೂರಿಗೆ ಇಂದು ಬರುವಾಗ ಹೃದಯ ಭಾರವಾಗುತ್ತದೆ, ಮತ್ತೆ ಇದನ್ನು ಗತವೈಭವದತ್ತ ಕೊಂಡೊಯ್ಯಬೇಕಿದೆ. ಇದಕ್ಕೆ ಯುವಜನರ ಸಹಕಾರದ ಅಗತ್ಯವಿದೆ ಎಂದರು.
ಅತಿಥಿಗಳಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರು ಹಾಗೂ ಅಳುಪ ರಾಜವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಇವರು ತುಳು ಲಿಪಿ ಫಾಂಟ್ ‘ಅಲ್ಲಿಗೆ’ ಲೋಕಾರ್ಪಣೆ ಮಾಡಿ ಕರ್ನಾಟದಲ್ಲಿ ಪ್ರಪ್ರಥಮವಾಗಿ ದೊರೆತ ಅಲ್ಮಿಡಿ ಶಿಲಾ ಶಾಸನವು ತುಳುಭಾಷೆ ಹಾಗೂ ತುಳುನಾಡಿನ ಉಲ್ಲೇಖವವನ್ನು ಒಳಗೊಂಡಿದೆ.
10ನೇ ಶತಮಾನದ ಬಂಕೀದೇವನ ಶಾಸನದಲ್ಲಿಯೂ ತುಳುವಿನ ಬಗ್ಗೆ ಹೇಳಲಾಗಿದೆ. 56 ತುಳು ಲಿಪಿ ಶಿಲಾ ಶಾಸನ, 1500ಕ್ಕೂ ವಿಕ್ಕಿ ತಾಳೆಗ್ರಂಥಗಳು ಹಾಗೂ ಹಲವಾರು ಮಹಾಕಾವ್ಯಗಳು ತುಳು ಲಿಪಿಯಲ್ಲಿ ದೊರೆತಿದೆ.
ಇಂತಹ ಸಂಪದ್ಭರಿತ ತುಳು ಭಾಷೆ, ಲಿಪಿ, ಸಂಸ್ಕೃತಿಯು ಆಂಗ್ಲರ ಆಡಳಿತದ ಅವಧಿಯಲ್ಲಿ ವಿನಾಶದ ಅಂಚಿಗೆ ಸೇರಿಹೋಯಿತು. ತುಳು ಲಿಪಿಯನ್ನು ಅಭಿವೃದ್ಧಿಪಡಿಸಿ ಫಾಂಟ್ ತಯಾರಿಸಿ ತುಳು ಲಿಪಿಯನ್ನು ಇಂದಿನ ಆಧುನಿಕ ಯುಗದಲ್ಲಿ ತುಳುವರೆಲ್ಲರಿಗೆ ಸುಲಭವಾಗಿ ಕಲಿಯುವಂತಹ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಪ್ರಹ್ಲಾದ್ ತಂತ್ರಿ ಹಾಗೂ ಜೈ ತುಲುನಾಡ್ ಸಂಘಟನೆಯನ್ನು ಅಭಿನಂದಿಸುತ್ತೇನೆ. ಕುಂದಗನ್ನಡ ಹಾಗೂ ತುಳುವಿಗೆ ವಿಶಿಷ್ಟವಾದ ಹೊಂದಾಣಿಕೆ ಇದ್ದು ಈ ಎರಡು ಭಾಷೆಗಳೂ ಸಾಂಸ್ಕೃತಿಕವಾಗಿ ಒಂದಕ್ಕೊಂದು ಹತ್ತಿರದ ಭಾಂದವ್ಯವನ್ನು ಹೊಂದಿದೆ. ಅವೆರಡೂ ಜತೆ ಜತೆಯಾಗಿ ಮುಂದುವರಿಯಬೇಕಿದೆ ಎಂದರು.
ಕರ್ನಾಟಕದಲ್ಲಿ 142 ತಮಿಳು ಶಾಲೆ, 162 ತೆಲುಗು ಶಾಲೆ, 4000 ಉರ್ದು ಶಾಲೆ, 1 ಗುಜರಾತಿ ಶಾಲೆ, ಕೊಡಗು ಜಿಲ್ಲೆಯಲ್ಲಿ 2 ಮಲೆಯಾಳಂ ಶಾಲೆಗಳಿದ್ದು ನಮ್ಮ ತುಳುನಾಡಿನಲ್ಲಿ ತುಳು ಭಾಷೆಗೆ ಒಂದೇ ಒಂದು ಶಾಲೆ ಇಲ್ಲದಿರುವುದು ನಮ್ಮ ದುರದೃಷ್ಟವಾಗಿದೆ. ಇದೀಗ ತುಳು ಭಾಷೆಯನ್ನು ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡುವಲ್ಲಿ ಸರಕಾರವು ಒಲವು ತೋರಿಸುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ ಎಂದರು.
ಮುಖ್ಯ ಅಥಿತಿಗಳಾದ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸಂಪಾದಕರಾದ ಶಶಿ ಬಂಡಿಮಾರ್ ಮಾತನಾಡಿ, ಹಲವು ವರ್ಷಗಳ ಹಿಂದೆ ಬಾರಕೂರಿಗೆ ಬಂದಾಗ ಅಲ್ಲಿಯ ಸ್ಥಿತಿ ಹೇಗಿತ್ತು, ಈಗ ಹೇಗಾಗಿದೆ, ಮುಂದಕ್ಕೆ ಹೇಗಾಗಬೇಕು ಎಂದು ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
ಜೈ ತುಲುನಾಡ್(ರಿ) ಉಪ್ಪಾಧ್ಯಕ್ಷರಾದ ವಿಶು ಶ್ರಿಕೇರ, ಜೈ ತುಲುನಾಡ್ ಸಂಘಟನೆ ನಡೆದು ಬಂದ ದಾರಿ, ಸಂಘಟನೆಯ ಧ್ಯೇಯೋದ್ದೇಶಗಳನ್ನು ಹೇಳಿ, ತುಳುನಾಡಿನ ಮೂಲೆ ಮೂಲೆಯಿಂದ ತುಳುವರ ದಂಡು ಬಾರಕೂರಿಗೆ ಮುಂದೊಂದುದಿನ ಬರುವಂತಾಗಬೇಕು, ಮತ್ತೆ ಬಾರಕೂರು ತುಳು ರಾಜ್ಯದ ರಾಜಧಾನಿಯ ವೈಭವವನ್ನು ಮೈದುಂಬಿಕೊಳ್ಳುವಂತೆ ಮಾಡುವ ಕೆಲಸ ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ತುಳು ಶಿಕ್ಷಣ ಕ್ರಾಂತಿ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತುಲುನಾಡಿನ ಕಂಬಳ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ, ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಪ್ರಶಸ್ತಿಯನ್ನು ಗಳಿಸಿದ ಶಾಂತರಾಮ ಶೆಟ್ಟಿ ಬಾರಕೂರು ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಘಟನೆಯ ಕಾರ್ಯದರ್ಶಿ ಅವಿನಾಶ್ ಮುಕ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮಂತ್ ಹೆಬ್ರಿ ಅಲ್ಲಿಗೆ ಫಾಂಟ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ಫಾಂಟ್ ಅಭಿವೃದ್ಧಿಪಡಿಸಿದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಪ್ರಹ್ಲಾದ್ ತಂತ್ರಿಯರನ್ನು ಬಾರಕೂರು ಊರವರ ಪರವಾಗಿ ಸನ್ಮಾನಿಸಲಾಯಿತು. ತುಳು ಲಿಪಿ ಕಲಿಸುತ್ತಿರುವ ಅಧ್ಯಾಪಕರಿಗೆ ಗೌರವ ಪತ್ರ ನೀಡಿ ಗೌರವಿಸಲಾಯಿತು.
ತುಳು ಲಿಪಿ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಅಂಜಲಿ ಪ್ರಾರ್ಥಿಸಿದರು. ರಕ್ಷಿತ್ ರಾಜ್ ಸ್ವಾಗತಿಸಿ, ಶರತ್ ಕೊಡವೂರು ವಂದನಾರ್ಪಣೆಗೈದರು. ಸುರೇಶ್ ನಾಯಕ್, ರಾಜೇಶ್ ತುಲುವ, ಸುಷ್ಮಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.