ಮಣಿಪಾಲ: ಇಂದು ನಾವು ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಯೋಚಿಸದೆ, ಕೇವಲ ಆರ್ಥಿಕ ಸುಸ್ಥಿರತೆಯ ದೃಷ್ಟಿಯಿಂದ ಮಾತ್ರ ಯೋಚಿಸುತ್ತಿರುವುದು ದುರದೃಷ್ಟಕರ ಎಂದು ಮಾಹೆಯ ಪರಿಸರಶಾಸ್ತ್ರಜ್ಞ ಡಾ. ವಿವೇಕ್ ಪಂಡಿ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ಪಶ್ಚಿಮ ಘಟ್ಟಗಳ ಪರಿಸರ’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಪಂಡಿ, ಹಿಮಾಲಯಕ್ಕಿಂತ ಹಳೆಯದಾದ ಪಶ್ಚಿಮ ಘಟ್ಟಗಳು ಈಗಾಗಲೇ ಜೀವವೈವಿಧ್ಯವನ್ನು ಕಳೆದುಕೊಂಡು ಅಪಾರ ಹಾನಿಯನ್ನು ಅನುಭವಿಸಿವೆ. ಹಾಗಾಗಿಯೇ ಅದನ್ನು ‘ಹಾಟ್‌ಸ್ಪಾಟ್’ ಎಂದು ಗುರುತಿಸಲಾಗಿದೆ. ಇಲ್ಲಿ ಜೀವವೈವಿಧ್ಯಗಳ ನಡುವೆ ಕ್ಲಿಷ್ಟ ಮತ್ತು ಸೂಕ್ಷ್ಮ ಪರಿಸರ ಜಾಲವಾಗಿದೆ. ಆದ್ದರಿಂದ ಇದನ್ನು ಎಲ್ಲಾ ರೀತಿಯ ಆಕ್ರಮಣಗಳಿಂದ ರಕ್ಷಿಸಬೇಕಾಗಿದೆ. ಅದು ಮಾನವ ಆಕ್ರಮಣವೇ ಆಗಲಿ ಅಥವಾ ಒಂದೇ ವರ್ಗದ ಸಸ್ಯಗಳ ಆಕ್ರಮಣವೇ ಆಗಲಿ ಎಂದರು.
ಅಭಿವೃದ್ಧಿ ಮತ್ತು ಸಂರಕ್ಷಣೆಯ ಚರ್ಚೆಗಳ ನಡುವೆ, ಸಮತೋಲನವನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಈ ಹೊತ್ತಲ್ಲಿ ಪರಿಸರ ಸುಸ್ಥಿರತೆಯ ಅವಶ್ಯಕತೆಯಿದೆ ಎಂದ ಅವರು ವಿಭಿನ್ನ ಸಂಶೋಧನೆಗಳು ಮತ್ತು ದತ್ತಾಂಶಗಳನ್ನು ಉಲ್ಲೇಖಿಸಿ ನಿರ್ದಿಷ್ಟವಾಗಿ ಪಶ್ಚಿಮ ಘಟ್ಟಗಳು ಹೇಗೆ ಅಪಾಯದಲ್ಲಿದೆ ಎಂಬುದನ್ನು ತೋರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಒಂದು ಹಂತದಲ್ಲಿ ಈ ಭಾಗದಲ್ಲಿ ಜೀವವೈವಿದ್ಯಗಳ ‘ಆಶ್ರಯದ ಸಾಮರ್ಥ್ಯ’ (ಕ್ಯಾರಿಯಿಂಗ್ ಕೆಪ್ಯಾಸಿಟಿ) ಅಧ್ಯಯನದ ಬಗ್ಗೆ ಚರ್ಚೆ ನಡೆದಿದೆ. ದುರದೃಷ್ಟವಶಾತ್ ಡಾ. ಮಾಧವ್ ಗಾಡ್ಗೀಲ್ ವರದಿಯನ್ನೇ ಕೈಬಿಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಸಿಪಿಎಎಸ್ ವಿದ್ಯಾರ್ಥಿಗಳ ಸಮಿತಿಗಳಾದ – ಇಕೋಸ್ಪಾಟ್ ಮತ್ತು ಇಕೋಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಹರ್ಷಿತಾ ಕೆ ಎನ್ ಸ್ವಾಗತಿಸಿ, ಯಶಸ್ವಿನಿ ಜಿ ವಂದಿಸಿದರು.