Monday, November 25, 2024
Monday, November 25, 2024

ಸ್ವಸ್ಥ ಸಮಾಜಕ್ಕೆ ವೈದ್ಯ-ರೋಗಿ ಅನುಬಂಧ

ಸ್ವಸ್ಥ ಸಮಾಜಕ್ಕೆ ವೈದ್ಯ-ರೋಗಿ ಅನುಬಂಧ

Date:

ವೈದ್ಯಕೀಯ ಕ್ಷೇತ್ರಗಳಲ್ಲಿ ಅನಾಹುತಗಳಾದಾಗ ನಡೆಯುವ ಪ್ರಕರಣಗಳು ಇಡಿ ವೈದ್ಯಲೋಕದ ಎದೆ ನಡುಗಿಸುತ್ತದೆ. 16ನೇ ವಯಸ್ಸಿನಿಂದ 28ರ ವರೆಗೆ ಹಗಲು ರಾತ್ರಿ ಓದಿ, ಒದ್ದಾಡಿ ಯೌವ್ವನದ ಹಲವು ವರ್ಷಗಳಲ್ಲಿ ಸುಖ, ಮನೋರಂಜನೆ, ನಿದ್ರೆಯನ್ನು ತ್ಯಾಗ ಮಾಡಿದ ಮೇಲೂ ತಾನೇಕೆ ಈ ವೃತ್ತಿಯನ್ನು ಆರಿಸಿದೆ ಎಂದು ಪರಿತಪಿಸುವಂತಾಗಿದೆ.

ವೈದ್ಯಕೀಯ ಅವಘಡಗಳಾದಾಗ ಆಕ್ರೋಶ ಭರಿತ ಕುಟುಂಬಿಕರು ಮತ್ತು ಅವರ ಕಡೆಯವರು ದಾಂಧಲೆ ಎಬ್ಬಿಸಿ ಆಸ್ಪತ್ರೆ ಅಥವಾ ಚಿಕಿತ್ಸಾಲಯ ರಣಾಂಗಣವಾದ ಘಟನೆಗಳಿಂದ ವೈದ್ಯರು ರಕ್ಷಣಾತ್ಮಕ ವಿಧಾನ ಅನುಸರಿಸುವ ಆತಂಕವಿದೆ. ಇದು ರೋಗಿಗಳು ರೋಗ ಪತ್ತೆ ಹಚ್ಚುವುದಕ್ಕಾಗಿ ಮತ್ತು ಅದರ ನಿಖರತೆಗಾಗಿ ಹೆಚ್ಚು ಹೆಚ್ಚು ಟೆಸ್ಟ್ ಗಳಿಗೆ ಮೊರೆ ಹೋಗುವಂತೆ ಮಾಡಬಹುದು. ಮತ್ತು ವೈದ್ಯರು ಸಾಮಾನ್ಯ ಕೇಸನ್ನು ನಿರಾಕರಿಸಿ ದೊಡ್ಡ ಆಸ್ಪತ್ರೆಗೆ ಕಳುಹಿಸುವಂತೆ ಮಾಡುವುದು. ಇದರಿಂದ ಚಿಕಿತ್ಸೆಯ ವೆಚ್ಚ ಹೆಚ್ಚಾಗುತ್ತದೆ.

ದೊಡ್ಡ ದೊಡ್ಡ ನಗರಗಳಲ್ಲಿ ಹಣ ಮಾಡುವುದೇ ದಂಧೆಯಾಗಿರುವ ಆಸ್ಪತ್ರೆಗಳಲ್ಲಿ ಇದರ ಸಂಪೂರ್ಣ ದುರುಪಯೋಗವೂ ಆಗಬಹುದು. ರೋಗ ಪತ್ತೆ ಮತ್ತು ಚಿಕಿತ್ಸೆಯ ದಾಖಲಿಕರಣಕ್ಕಾಗಿಯೇ ರೋಗಿಗಳು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಬಹುದು.

ಉದಾಹರಣೆಗೆ ಒಂದು ಸಾಮಾನ್ಯ ಜ್ವರ ಬಂದಾಗ ಚಿಕ್ಕ ಪಟ್ಟಣ ಮತ್ತು ಹಳ್ಳಿಗಳಲ್ಲಿ ವೈದ್ಯರು ನೇರವಾಗಿ ಚಿಕಿತ್ಸೆ ಆರಂಭಿಸಿ ರೋಗಿಯು ಶೀಘ್ರ ಗುಣಮುಖನಾದರೆ ದೊಡ್ಡ ನಗರಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಕನಿಷ್ಠ ದಾಖಲೀಕರಣ ಉದ್ದೇಶಕ್ಕಾಗಿಯಾದರು ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಇತರ ಪರೀಕ್ಷೆಗಳಿಗಾಗಿ ಹಣವನ್ನು ವ್ಯಯಿಸಬೇಕಾಗಬಹುದು.

ವೈದ್ಯರ ನಿರ್ಲಕ್ಷದಿಂದ ರೋಗಿಯ ಮರಣವಾಯಿತೆಂದು ಯಾರಿಗಾದರೂ ಅನ್ನಿಸಿದಲ್ಲಿ ಸ್ವಲ್ಪ ತಾಳ್ಮೆಯಿಂದ ವೈದ್ಯರ ನಿರ್ಲಕ್ಷ ಹೌದೋ ಅಲ್ಲವೋ ಎಂಬುದರ ಸತ್ಯ -ಸತ್ಯತೆಯನ್ನು ಪರಿಶೀಲಿಸಬೇಕು. ಮನುಷ್ಯನ ದೇಹವೆಂಬುದು ಇಂದಿಗೂ ಕೂಡ ಭೇದಿಸಲಾಗದ ಅನೇಕ ನಿಗೂಢತೆಗಳನ್ನು ಒಳಗೊಂಡಿದ್ದು ವೈದ್ಯಕೀಯ ವಿಜ್ಞಾನವೆಂಬುದೇ ಅತ್ಯಂತ ಕ್ಲಿಷ್ಟಕರವಾದ ವಿಷಯವಾಗಿದ್ದು ಹಲವು ಬಾರಿ ಎಷ್ಟೋ ಪರಿಣಿತ ವೈದ್ಯರ ಊಹೇಗೂ ಮೀರಿ ಅನಾಹುತಗಳು ಸಂಭವಿಸಿ ಬಿಡುತ್ತದೆ.

ಮರಣವಾದಾಗ ಸಂಬಂದಿಕರ ದುಃಖ ಖಂಡಿತವಾಗಿಯೂ ನೋವು ತರುವ ವಿಚಾರ. ಆದರೆ ಈ ಸಂದರ್ಭದಲ್ಲಿ ಎರಡು ವಿಚಾರಗಳನ್ನು ನೆನಪಿನಲ್ಲಿಡಬೇಕು.

1) ವೈದ್ಯರು ಕೂಡ ಮನುಷ್ಯರೇ ಮತ್ತು ಇತರ ಎಲ್ಲಾ ಮಾನವರಿಗೆ ಅನ್ವಯಿಸುವ ಕಷ್ಟಗಳು ಸಮಸ್ಯೆಗಳು ವೈದ್ಯರನ್ನೂ, ಅವರ ಕುಟುಂಬದವರನ್ನೂ ಬಾಧಿಸುತ್ತದೆ. ಯಾವ ವೈದ್ಯರೂ ಕೂಡ ತಾವಾಗಿ ತಮ್ಮ ಶ್ರಮ ಹೆಸರನ್ನು ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಪ್ರತಿ ವ್ಯಕ್ತಿಯು ತನ್ನ ಕಾರ್ಯದಲ್ಲಿ ಎಡವುತ್ತಾರೆ ಎಂಬುದನ್ನು ಕೂಡ ಮರೆಯಬಾರದು. ಆಸ್ಪತ್ರೆಯ ಆಡಳಿತಾತ್ಮಕ ಕೊರತೆ, ನಿರ್ಲಕ್ಷ್ಯವನ್ನು ಅಸಹನೆಯಿಂದ ತಪ್ಪಾಗಿ ಅರ್ಥೈಸಿಕೊಂಡು ವೈದ್ಯರ ತಲೆಗೆ ಕಟ್ಟುವಂತ ತಪ್ಪು ಆಗಬಾರದು.

2) ವೈದ್ಯಕೀಯ ನಿರ್ಲಕ್ಷ್ಯವನ್ನು “ನಿರ್ಲಕ್ಷ್ಯ” ಎಂದು ಕೆಲವೇ ನಿಮಿಷದಲ್ಲಿ ನಿರ್ಧರಿಸುವುದು ಸ್ವತಃ ಇನ್ನೋರ್ವ ವೈದ್ಯರಿಗೂ ಸಾಧ್ಯವಿಲ್ಲ. ಅಂತಹದರಲ್ಲಿ ರೋಗಿಯ ಸಂಬಂಧಿಕರು ಕೆಲವೇ ನಿಮಿಷದಲ್ಲಿ ನಿರ್ಲಕ್ಷ್ಯ ಎಂದು ಘೋಷಿಸುವುದು ತಪ್ಪಾಗುತ್ತದೆ. ವೈದ್ಯಕೀಯ ನಿರ್ಲಕ್ಷ್ಯವನ್ನು ಶಿಕ್ಷಿಸಲು ನಮ್ಮಲ್ಲಿ ಉತ್ತಮವಾದ ಕಾನೂನುಗಳಿವೆ. ಗ್ರಾಹಕ ನ್ಯಾಯಾಲಯವಿದೆ. ನಿರ್ಲಕ್ಷ್ಯವೆಂದು ಸಾಬೀತಾದಾಗ ಉತ್ತಮ ಪರಿಹಾರಗಳನ್ನು ಕೂಡ ಕೊಡಲಾಗುತ್ತದೆ. ಖಂಡಿತವಾಗಿಯೂ ಮನುಷ್ಯನ ಜೀವವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ ಹಾಗೆಯೇ ವೈದ್ಯರು ದೇವರಾಗಲೂ ಸಾಧ್ಯವಿಲ್ಲ.

ಇದನ್ನೆಲ್ಲಾ ಮರೆತು ಆಕಸ್ಮಿಕ ಮರಣವಾದಾಗ ಆಕ್ರೋಶಭರಿತ ರೋಗಿಯ ಸಂಬಂಧಿಕರು ಸಹನೆ ಕಳೆದುಕೊಂಡು ಅಥವಾ ಮೂರನೇ ವ್ಯಕ್ತಿ /ಸಂಘಟನೆಗಳ ಕುಮ್ಮಕ್ಕಿನಿಂದ ಪ್ರೇರಣೆಗೊಂಡು ದಾಂಧಲೆಗಳನ್ನು ಮಾಡಿದಾಗ ವೈದ್ಯ -ರೋಗಿಯ ನಡುವೆ ಅಪನಂಬಿಕೆ ಬೆಳೆದು ಸಮಾಜಕ್ಕೆ ಇನ್ನಷ್ಟು ಮಾರಕವಾಗುತ್ತದೆ ಎಂಬುದನ್ನು ಮರೆಯಬಾರದು. ರೋಗಿಯ ರಕ್ಷಣೆಗಿಂತ ವೈದ್ಯರು ತಮ್ಮ ರಕ್ಷಣೆಗೆ ಗಮನ ಕೊಡುವಂತಾದರೆ ಸಮಸ್ಯೆ ಮತ್ತಷ್ಟು ಉಲ್ಭಣಿಸಬಹುದು.

ಇದೂ ಅಲ್ಲದೇ ಇಂತಹ ಘರ್ಷಣೆಗಳು ವೈದ್ಯರನ್ನು ತಮ್ಮ ವೃತ್ತಿ ತೊರೆಯುವಂತೆ ಮಾಡಬಹುದು. ಈ ತೊಂದರೆಯೇ ಬೇಡವೆಂದು ಪ್ರತಿಭಾವಂತ ವೈದ್ಯರುಗಳು ವೃತ್ತಿಗಾಗಿ ವಿದೇಶಕ್ಕೆ ತೆರಳಬಹುದು. ವೈದ್ಯರ ಮಕ್ಕಳು ಮತ್ತು ಇತರೆ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸಬಹುದು. ಇಂತಹ ಘಟನೆಗಳು ಈಗಾಗಲೇ ನಮ್ಮ ಸುತ್ತಮುತ್ತ ನಡೆಯುತ್ತಲಿದೆ. ಇದರಿಂದ ದೇಶಕಾಗುವ ನಷ್ಟ ಅಷ್ಟಿಷ್ಟಲ್ಲ.

ವೈದ್ಯ -ರೋಗಿ ಸಂಬಂಧವು ನಂಬಿಕೆ, ವಿಶ್ವಾಸ, ಭರವಸೆಯ ತಳಹದಿಯ ಮೇಲೆ ನಿಲ್ಲಬೇಕೇ ಹೊರತು, ಅದು ಒಂದು ಒಪ್ಪಂದ ಅಥವಾ ಹಣಕಾಸಿನ ವ್ಯವಹಾರ ಆಗದಂತೆ ಇಡೀ ಸಾಮಾಜ ಜಾಗ್ರತವಾಗಿರುವಂತಹ ಅವಶ್ಯಕತೆ ಇದೆ. ಇದರಲ್ಲಿ ವೈದ್ಯರ ಜವಾಬ್ದಾರಿಯೂ ಇದೆ. ಮಾಧ್ಯಮ ಮತ್ತು ನ್ಯಾಯಾಂಗದ ಪಾತ್ರವು ಮಹತ್ತರವಾಗಿರುತ್ತದೆ. ವೈದ್ಯರಿಗೆ ರಕ್ಷಣೆ ಕೊಡುವುದು ಸರಕಾರದ ಆದ್ಯ ಕರ್ತವ್ಯ ಆಗಬೇಕು

ವೈದ್ಯಲೋಕವೂ ಕೂಡ ಎಷ್ಟೇ ಒತ್ತಡಗಳಿದ್ದರೂ ಮಾನವೀಯತೆಯನ್ನು ಮರೆಯದೆ ರೋಗಿಗಳ ನೋವಿಗೆ ಸ್ಪಂದಿಸುವುದು ಅತ್ಯಗತ್ಯ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಇಂತಹ ಘಟನೆಗಳ ಸತ್ಯಾಸತ್ಯತೆಯನ್ನು ಜವಾಬ್ದಾರಿಯುತವಾಗಿ ಪ್ರಸಾರ ಮಾಡುವುದು ಸ್ವಸ್ಥ ಸಮಾಜಕ್ಕೆ ಅತೀ ಅಗತ್ಯ.

ಡಾ. ಆಕಾಶ್ ರಾಜ್ ಜೈನ್
ಟೂತ್ ಕ್ಲಿನಿಕ್
ಸಂತೆಕಟ್ಟೆ
ಉಡುಪಿ
ಫೋನ್- 9886328079

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!