ಉಡುಪಿ: ತೆಂಗು ಅಭಿವೃದ್ಧಿ ಮಂಡಳಿಯು ಓರಿಯೆಂಟಲ್ ವಿಮಾ ಕಂಪನಿ ಲಿಮಿಟೆಡ್ ಸಹಯೋಗದೊಂದಿಗೆ ಜಾರಿಗೆ ತಂದಿರುವ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ತೆಂಗಿನ ಮರ ಹತ್ತುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗು ಕೊಯ್ಲು ಮಾಡುವವರಿಗೆ ಮತ್ತು ತೆಂಗಿನ ಮರಗಳ ಸ್ನೇಹಿತರು ತರಬೇತಿದಾರರಿಗೆ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದು, ಪ್ರಸ್ತುತ ಫಲಾನುಭವಿಯ ಪ್ರೀಮಿಯಂ ಮೊತ್ತ 99 ರೂ. ಗಳಾಗಿದ್ದು, ಈ ಯೋಜನೆಯು ಅಕ್ಟೋಬರ್ 31 ರಂದು ಮುಕ್ತಾಯವಾಗಲಿದೆ.
ಕೇರಾ ಸುರಕ್ಷಾ ವಿಮಾ ಯೋಜನೆಯು ಅಪಘಾತ ವಿಮಾ ಯೋಜನೆಯಾಗಿದ್ದು, ಒಂದು ಲಕ್ಷ ರೂ.ವರೆಗೆ ಆಸ್ಪತ್ರೆಗೆ ದಾಖಲಾದ ವೆಚ್ಚಕ್ಕೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವವರು ಅಗತ್ಯ ದಾಖಲೆ ಮತ್ತು ಪ್ರಮಾಣೀಕರಣದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್ www.coconutboard.gov.in ದೂರವಾಣಿ: 0484-2377266 ಅನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕೃಷಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು, ಸಿ.ಪಿ.ಎಫ್ ಪದಾಧಿಕಾರಿಗಳು ಅಥವಾ ಸಿ.ಪಿ.ಎಫ್ ನಿರ್ದೇಶಕರುಗಳಿಂದ ಮೇಲುರುಜು ಮಾಡಿ, ತೆಂಗು ಅಭಿವೃದ್ಧಿ ಮಂಡಳಿ ಪರವಾಗಿ ಎರ್ನಾಕುಲಂನಲ್ಲಿ ಪಾವತಿಸುವಂತೆ ರೂ. 99/- ರ ಡಿಮ್ಯಾಂಡ್ ಡ್ರಾಫ್ಟ್ ಮತ್ತು ವಯಸ್ಸಿನ ಪುರಾವೆಯ ಪ್ರತಿಯೊಂದಿಗೆ ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ – 682011, ಕೇರಳಕ್ಕೆ ಕಳುಹಿಸಬೇಕು. ಪ್ರೀಮಿಯಂನ ಫಲಾನುಭವಿಯ ಪಾಲನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಬಹುದುದಾಗಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿಯ ಪ್ರಕಟಣೆ ತಿಳಿಸಿದೆ.