ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿದ್ದು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ವಾತಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಇವರು ಅರವಿಂದ ಶೆಟ್ಟಿ ಮತ್ತು ವೇದಾವತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಲಿಕೆಯಲ್ಲೂ ಪ್ರತಿಭಾನ್ವಿತೆ. ಕಾಲೇಜಿನ ಎನ್.ಎಸ್.ಎಸ್‌ನ ಬಾಲಕಿಯರ ತಂಡದ ನಾಯಕಿಯೂ ಆಗಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಮಾರ್ಗದರ್ಶನ ನೀಡಿರುತ್ತಾರೆ.
ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದು, ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದೆ.