ಮಕ್ಕಳು ನಮ್ಮ ಸಮಾಜದ ನಗು ಮತ್ತು ನಮ್ಮ ಭವಿಷ್ಯದ ಭರವಸೆಗಳು. ಅವರು ತಮ್ಮದೆ ಆದ ಮೂಲಭೂತ ಹಕ್ಕುಗಳನ್ನು ಹೊಂದಿರುವ ಮಾನವ ಜೀವಿ. ಮಕ್ಕಳು ಅವರ ಅಗತ್ಯತೆಗಳು ಮತ್ತು ಆಸೆಗಳನ್ನು ಕೇಳಬೇಕು ಮತ್ತು ಗೌರವಿಸಬೇಕು.
ಎಳೆಯ ಸಸಿಗಳಂತೆಯೇ, ಮಕ್ಕಳಿಗೆ ಹೆಚ್ಚಿನ ಕಾಳಜಿ, ಬೆಂಬಲ ಮತ್ತು ಇಚ್ಛಾಶಕ್ತಿ ಮತ್ತು ನಿರ್ಣಯದೊಂದಿಗೆ ವ್ಯಕ್ತಿಗಳಾಗಿ ಬೆಳೆಯಲು ಅನುವು ಮಾಡಿಕೊಡುವ ವಾತಾವರಣದ ಅಗತ್ಯವಿದೆ. ಮಕ್ಕಳು ಕಲಿಯಲು, ಶಿಕ್ಷಣ ಪಡೆಯಲು, ಅವರ ಸೃಜನಶೀಲತೆಯನ್ನು ಪೋಷಿಸಲು ಮತ್ತು ಜಗತ್ತನ್ನು ಅನ್ವೇಷಿಸಲು ಸುಲಭ ಪ್ರವೇಶವನ್ನು ಹೊಂದಿರಬೇಕು.
ಅವರಿಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಆರೋಗ್ಯಕರ ಪೌಷ್ಟಿಕ ಆಹಾರ, ಸುರಕ್ಷಿತ ಆಶ್ರಯ, ಬಟ್ಟೆ ಮತ್ತು ಸಕಾಲಿಕ ರೋಗನಿರೋಧಕಗಳ ಅಗತ್ಯವಿದೆ.
ಮಕ್ಕಳು ತಮ್ಮ ಬಾಲ್ಯವನ್ನು ಆನಂದದಾಯಕವಾಗಿ, ಸಂತಸದಾಯಕವಾಗಿ ಆನಂದಿಸಲು ಅವರಿಗೆ ಸೂಕ್ತ ವಾತವರಣವನ್ನು ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಮುಗ್ಧತೆಗೆ ಸಮಾಜದ ಅನಿಷ್ಟ ಪದ್ಧತಿಗಳಿಂದ ರಕ್ಷಣೆ ನೀಡಬೇಕು ಮತ್ತು ಇದಕ್ಕಾಗಿ ಸ್ಥಳೀಯ ಸರಕಾರ ಮತ್ತು ಕುಟುಂಬ, ಸಮಾಜ (ಸಮುದಾಯ) ವು ಅವರಿಗೆ ಭದ್ರತೆಯನ್ನು ಒದಗಿಸಬೇಕು.
ಬಾಲ್ಯದಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಪೂರೈಸಲು ಮತ್ತು ಸಂತೋಷದಾಯಕ ಬಾಲ್ಯವನ್ನು ಹೊಂದಲು ಮಕ್ಕಳಿಗೆ ಅಡೆತಡೆಯಿಲ್ಲದ ಮಗು ಸ್ನೇಹಿ ಸಮಾಜ ನಿರ್ಮಾಣ ಮಾಡುವುದು, ಸ್ಥಳೀಯ ಸರಕಾರದ ಜವಬ್ದಾರಿಯಾಗಿದೆ. ಪ್ರಮುಖವಾಗಿ ಇದರಲ್ಲಿ, ಮಗು ಎಂದರೆ ಯಾರು?, ಮಕ್ಕಳಿಗೆ ರಕ್ಷಣೆ ಏಕೆ ಬೇಕು, ಅವರಿಗೆ ಸ್ವಂತ ಹಕ್ಕುಗಳು ಯಾಕೆ ಬೇಕು, ವಿಶ್ವಸಂಸ್ಥೆಯ ಪ್ರಕಾರ ಮಕ್ಕಳ ಹಕ್ಕುಗಳು ಯಾವುವು? ಮತ್ತು ಸ್ಥಳೀಯ ಮಟ್ಟದಲ್ಲಿ ಹೇಗೆ ಇವುಗಳನ್ನು ಹೇಗೆ ಅಳವಡಿಸಿಕೊಳ್ಳಲಾಗುತ್ತದೆ? ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸ್ಥಳೀಯ ಸರಕಾರದ ಜವ್ದಾರಿಗಳೇನು? ಪ್ರಮುಖವಾಗಿ ಮಕ್ಕಳ ಶಿಕ್ಷಣ, ಆರೋಗ್ಯ, ರಕ್ಷಣೆಯಲ್ಲಿ ಸ್ಥಳೀಯ ಸರಕಾರದ ಪಾತ್ರಗಳೇನು?
ಸುಸ್ಥಿರ ಅಭಿವೃದ್ಧಿಗಳು ಮತ್ತು ಮಕ್ಕಳು, ಸ್ಥಳೀಯ ಸರಕಾರಗಳು: ವಿಶ್ವಸಂಸ್ಥೆಯು ಮಂಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರಲ್ಲಿ 17 ಗುರಿಗಳು, 169 ಲಕ್ಷ್ಯಗಳು ಹಾಗು 230 ಸೂಚಕಗಳಿವೆ. ಒಂದು ಅಂದಾಜಿನ ಪ್ರಕಾರ ಸುಮಾರು ಏಳು ಗುರಿಗಳು ಮತ್ತು ಸುಮಾರು 50 ಲಕ್ಷ್ಯಗಳು ನೇರವಾಗಿ ಮಕ್ಕಳಿಗೆ ಸಂಬಂಧಿಸಿದ್ದೇ ಆಗಿವೆ.
ಈ ಗುರಿಗಳನ್ನು ನಾವೆಲ್ಲರೂ ಒಟ್ಟಾಗಿ 2030ರೊಳಗೆ ಸಾಧಿಸಿದರೆ ನಮ್ಮ ಎಲ್ಲ ರಾಜ್ಯಗಳ, ದೇಶದ ಮತ್ತು ವಿಶ್ವದ ಬಹುತೇಕ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವುದು ಖಂಡಿತಾ. ಈ ಗುರಿಗಳನ್ನು ಸಾಧಿಸಲು ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನ ಸಾಲದು. ಇದರ ಜೊತೆಗೆ ಎಲ್ಲ ಸ್ಥಳೀಯ ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರೋದ್ಯಮಗಳು, ಸೇವಾ ವಲಯಗಳು, ಸಮುದಾಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಾದ ನೀವು ಈ ಗುರಿಗಳನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ.
ಏಕೆಂದರೆ ಈ ಗುರಿಗಳನ್ನು 2030ರೊಳಗೆ ಸಾಧಿಸಬೇಕಿರುವುದರಿಂದ ಆ ಸಮಯಕ್ಕೆ ಈಗ ಮಕ್ಕಳಾಗಿರುವ ನೀವು ಜವಾಬ್ದಾರಿಯುತ ಯುವಜನಾಂಗವಾಗಿರುತ್ತೀರಿ. ಈ ಗುರಿಗಳನ್ನು ಸಾಧಿಸಲು ನಿಮ್ಮ ಕೊಡುಗೆಯೂ ಸಹ ಮಹತ್ವಪೂರ್ವದ್ದಾಗಿದೆ. ಮುಂದಿನ 8 ವರ್ಷಗಳಲ್ಲಿ ಈ ಗುರಿಗಳನ್ನು ಸಾಧಿಸಲು ಕೈಲಾದ ಮಟ್ಟಿಗೆ ಪ್ರಯತ್ನಿಸೋಣ.