ಮಂಗಳೂರು: ಶ್ರೀ ಭುವನೇಂದ್ರ ಸ್ವಾಮೀಜಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಳೆದ 11 ವರ್ಷಗಳಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿದ್ದು, 2021-22 ಸಾಲಿನಲ್ಲಿ 65 ಕೋಟಿ ವಹಿವಾಟು ನಡೆಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ 75 ಕೋಟಿ ರೂಪಾಯಿ ವ್ಯವಹಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಸ್ ಸತೀಶ್ ನಾಯಕ್ ತಿಳಿಸಿದ್ದಾರೆ.
ಅವರು ಸಹಕಾರಿ ಸಂಘದ 2021-22 ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಉದ್ಘಾಟನೆಯಾಗಿದೆ ಎಂದು ಅವರು ತಿಳಿಸಿದರು.
ಅಕ್ಟೋಬರ್ 1 ರಿಂದ ಠೇವಣಿಗಳ ಬಡ್ಡಿದರವನ್ನು 8% ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನಿರ್ದೇಶಕಿಯಾಗಿ ಚುನಾಯಿತರಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿರುವ ಭಾರತಿ ಜಿ ಭಟ್ ಅವರನ್ನು ಸನ್ಮಾನಿಸಲಾಯಿತು.
ಸೇವಾ ಭಾರತಿ ವತಿಯಿಂದ ಇದರ ಅಂಗಸಂಸ್ಥೆಯಾಗಿರುವ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ 25-30 ವರ್ಷಗಳಿಂದ ನಿಸ್ವಾರ್ಥ ಸೇವೆಗೈದಿರುವ ಗೋಪಾಲಕೃಷ್ಣ ಶೆಣೈ, ಸುಮನಾ ಬಾಳಿಗಾ, ಕುಸುಮಾ ಇವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಸಿಎ ಜಗನ್ನಾಥ ಕಾಮತ್ ಸ್ವಾಗತಿಸಿ, ನಿರ್ದೇಶಕ ಮಂಡಳಿಯ ನಿವೇದಿತಾ ಜಿ ಪ್ರಭು ವಂದಿಸಿದರು.