ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿಗಳು ಸೇರಿದಂತೆ ಈ ವರೆಗಿನ ಎಲ್ಲ ನೇಮಕಾತಿಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಒತ್ತಾಯಿಸುತ್ತೇನೆ ಎಂದು ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಪಿಎಸ್‌ಐ ಹಗರಣದ ಹಿಂದೆ ಯಾವುದಾದರೂ ರಾಜಕಾರಣಿಗಳ ಕೈವಾಡ ಇದೆಯಾ? ಮಂತ್ರಿಗಳು ಹಾಗೂ ಅವರ ಸಂಬಂಧಿಕರು ಇದರಲ್ಲಿ ಷಾಮೀಲಾಗಿದ್ದಾರೆಯೇ? ಈ ಎಲ್ಲ ಸತ್ಯ ಸಂಗತಿ ಹೊರಬರಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನು ಕರೆದು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಈ ನೇಮಕಾತಿ ಹಗರಣದಲ್ಲಿ 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೆ ಇರುತ್ತದೆಯೋ? ಇದರಲ್ಲಿ ನಾಲ್ಕು ಜನ ಮಂತ್ರಿಗಳು ಷಾಮೀಲಾಗಿದ್ದಾರೆ ಎಂಬ ವಕೀಲರ ಸಂಘದ ರಂಗನಾಥ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಬಂಧಿತ ಎಡಿಜಿಪಿ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಯಾರು ನೇಮಕ ಮಾಡಿದ್ದು? ಪ್ರಕರಣ ಬೆಳಕಿಗೆ ಬಂದು ಅವರ ಕಚೇರಿ ಮೇಲೆ ದಾಳಿ ನಡೆದ ನಂತರ ಅವರನ್ನು ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲು ಏನು ಕಾರಣ? ಅಮೃತ್ ಪೌಲ್ ಅವರನ್ನು ಮಂಪರು ಪರೀಕ್ಷೆ ಏಕೆ ಮಾಡಬಾರದು? ಐಪಿಸಿ ಸೆಕ್ಷನ್ 164ರಡಿ ಅವರ ಹೇಳಿಕೆಯನ್ನು ಏಕೆ ರೆಕಾರ್ಡ್ ಮಾಡಿಲ್ಲ? ಖಾಲಿ ಉತ್ತರ ಪತ್ರಿಕೆ ತುಂಬಲು ಎಡಿಜಿಪಿ ಅವರು ಯಾರ ನಿರ್ದೇಶನದ ಮೇಲೆ ಕಾನ್ಸ್ ಟೆಬಲ್ ಗಳನ್ನು ಕಳಿಸಿದ್ದರು? ಇವುಗಳ ಬಗ್ಗೆಯೂ ತನಿಖೆಯಾಗಲಿ ಎಂದು ಸಿದ್ಧರಾಮಯ್ಯ ಹೇಳಿದರು.
ನಮ್ಮ ಕಾಲದಲ್ಲಿ ಕೂಡ ಪೊಲೀಸ್ ನೇಮಕಾತಿಯಲ್ಲಿ ಹಗರಣಗಳಾಗಿವೆ ಎಂದು ಸುಳ್ಳು ಆರೋಪ ಮಾಡುವುದು ಸರಿ ಅಲ್ಲ. ನಾವು ಸಾವಿರಾರು ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದೇವೆ. ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ.
ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಬರುವಂತೆ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದಾರೆ. ಅಕ್ರಮದ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಸಚಿವ ಪ್ರಭು ಚೌಹ್ಹಾಣ್ ಅವರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ.
ನೇಮಕಾತಿಯಲ್ಲಿನ ಅಕ್ರಮಕ್ಕಾಗಿ ಎಲ್ಲ 545 ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿರುವುದು ಸರಿಯಲ್ಲ. ಇವರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಮಕ್ಕಳನ್ನು ಪ್ರತ್ಯೇಕವಾಗಿ ವಿಂಗಡಿಸಲು ಸಾಧ್ಯ ಇದೆ ಎಂದು ಡಿಜಿಪಿ ಹೇಳಿದ್ದಾರೆ. ಈ ಸಲಹೆಯನ್ನು ಸರ್ಕಾರ ಪರಿಶೀಲಿಸಬೇಕು ಎಂದು ಸಿದ್ಧರಾಮಯ್ಯ ಹೇಳಿದರು.