ಉಡುಪಿ: ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದ ಅನುದಾನದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಹೀಗೆ ಸರ್ಕಾರದ ಎಲ್ಲಾ ಅನುದಾನವನ್ನು ಸಮರ್ಪಕವಾಗಿ ಮನೆ ಮನೆಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಹೇಳಿದರು.
ಆ ಸಮಯದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆ. ಕಾರ್ತಿಕೇಯ ಭಟ್ ಇವರು ಮನೆಯ ನಿರ್ಮಾಣಕ್ಕೆ ಸ್ಪಂದಿಸಿ ಸುಮಾರು 13 ಮನೆಗಳಿಗೆ ಅನುದಾನವನ್ನು ತರಲು ಉತ್ತಮವಾಗಿ ಸಹಕರಿಸಿದ್ದಾರೆ ಎಂದು ಹೇಳಿದರು.
ಕೊಡವೂರಿನ ವಿವೇಕಾನಂದ ಮಾರ್ಗ ಅತ್ತಲಾಡಿ ಪರಿಸರದ ತೋಮ ಪೂಜಾರಿ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಡವೂರಿನ ನಾಗರಿಕರ ಪರವಾಗಿ ಕೆ. ಕಾರ್ತಿಕೇಯ ಭಟ್ ಅವರನ್ನು ಗೌರವಿಸಲಾಯಿತು.
ಸಿ. ಎ ಬ್ಯಾಂಕ್ ಕೊಡವೂರು ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಸುರೇಶ್ ಶೇರಿಗಾರ್, ಸದಾನಂದ ಶೇರಿಗಾರ್, ವಿನಯ್ ಮುಂತಾದವರು ಉಪಸ್ಥಿತರಿದ್ದರು.