ಕಲ್ಯಾಣಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗಾಗಿ ನಡೆದ ಸಮಾಜಕಾರ್ಯ ಶಿಬಿರದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಲ್ಯಾಣಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಅಜಿತ್ ಕುಮಾರ್ ಕೊಡವೂರು ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನೇಜಾರಿನ ಸಮುದಾಯ ಆರೋಗ್ಯ ಅಧಿಕಾರಿ ಸರಸ್ವತಿ ಅವರು ಮಾತನಾಡಿ, ಇಂತಹ ಆರೋಗ್ಯ ಶಿಬಿರಗಳು ಇತ್ತೀಚೆಗೆ ಮಹತ್ವವನ್ನು ಪಡೆಯುತ್ತಿವೆ. ಆರಂಭದ ಹಂತದಲ್ಲಿ ಕೆಲವು ಖಾಯಿಲೆಗಳು ತಮ್ಮ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.
ಯಾವುದೇ ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಜನಸಾಮಾನ್ಯರು ಆರೋಗ್ಯ ತಪಾಸಣೆ ಮಾಡಿಸುವುದೇ ಇಲ್ಲ. ಕೆಲವು ಖಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೆ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ. ಮನುಷ್ಯ ಸಾಮಾನ್ಯವಾಗಿ ೩೦ ವರ್ಷದ ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡುತ್ತಿರಬೇಕು.
ಈ ನಿಟ್ಟಿನಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಶಿಬಿರವನ್ನು ಆಯೋಜಿಸಿದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಟಿ. ಸೀತಾ, ನಿಡಂಬಳ್ಳಿಯ ಸಮುದಾಯ ಆರೋಗ್ಯ ಅಧಿಕಾರಿ ದೀಪ್ತಿ, ಶಿಬಿರಾಧಿಕಾರಿ ಸುಷ್ಮಾ ಟಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸಜನಿ ಸ್ವಾಗತಿಸಿ, ಬಿ.ಕೆ. ಕಿರಣ್ ವಂದಿಸಿದರು. ಸ್ಪಂದನ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ದುಗ್ಗಪ್ಪ ಕಜೆಕಾರ್, ಡಾ. ರಾಘವ ನಾಯ್ಕ್, ಉಪನ್ಯಾಸಕರಾದ ರಾಜೇಂದ್ರ ಎಂ, ಉಷಾ, ಶ್ರೀಕಲಾ ಕುಮಾರಿ, ಸುಮತಿ ಬಿಲ್ಲವ, ರವಿರಾಜ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.