Monday, November 25, 2024
Monday, November 25, 2024

ಅವರು ನಿರಪರಾಧಿ ಎಂದು ಇಡೀ ಜಗತ್ತಿಗೆ ಗೊತ್ತಿತ್ತು!

ಅವರು ನಿರಪರಾಧಿ ಎಂದು ಇಡೀ ಜಗತ್ತಿಗೆ ಗೊತ್ತಿತ್ತು!

Date:

ಅಂತಹ ಘಟನೆಯು ಭಾರತದ ಯಾವುದೇ ಸಿನೆಮಾ ರಂಗದಲ್ಲಿ ಕೂಡ ನಡೆದಿರಲು ಸಾಧ್ಯವೇ ಇಲ್ಲ! ಅದನ್ನು ನೆನೆಯುವಾಗ ಈಗಲೂ ಮೈಬೆವರುತ್ತದೆ! ಆ ದುರಂತ ಏನಾದರೂ ನಡೆದಿದ್ದರೆ…? ಕನ್ನಡ ಚಿತ್ರರಂಗವು ಮತ್ತೆ ತಲೆ ಎತ್ತಲು ಸಾಧ್ಯವೇ ಇರಲಿಲ್ಲ!

1973ರ ಹೊತ್ತು. ‘ಗಂಧದ ಗುಡಿ’ ಸಿನೆಮಾದ ಶೂಟಿಂಗ್ ಕಾಡಿನ ಮಧ್ಯೆ ಭರದಿಂದ ನಡೆಯುತ್ತಿತ್ತು. ಕನ್ನಡದ ವರನಟ ಡಾ. ರಾಜಕುಮಾರ್ ಅದರ ಕಥಾನಾಯಕ. ಅವರು ಆಗಲೇ ಭಾರತೀಯ ಸಿನೆಮಾ ರಂಗದ ಗಮನ ಸೆಳೆದಾಗಿತ್ತು. ಅವರ ಜೊತೆ ಖಳ ಛಾಯೆಯ ಅವರ ಸೋದರನ ಪಾತ್ರದಲ್ಲಿ ವಿಷ್ಣುವರ್ಧನ್ ಅಭಿನಯ ಮಾಡುತ್ತಿದ್ದರು. ವಿಷ್ಣು ಆಗ ಕನ್ನಡದ ಹೊಸ ನಟ! ನಾಗರಹಾವು ಸೂಪರ್ ಹಿಟ್ ಆಗಿದ್ದರೂ ತಾರಾ ವರ್ಚಸ್ಸು ಬಂದಿರಲಿಲ್ಲ.

ಅದು ಸಿನೆಮಾದ ಕ್ಲೈಮಾಕ್ಸ್ ದೃಶ್ಯದ ಶೂಟಿಂಗ್. ಆಕ್ರೋಶದಲ್ಲಿ ವಿಷ್ಣು ಅವರು ರಾಜ್ ಕಡೆಗೆ ಗುಂಡು ಹಾರಿಸುವ ದೃಶ್ಯ. ವಿಷ್ಣು ಕೈಯ್ಯಲ್ಲಿ ಯಾರೋ ಒಂದು ಡಬಲ್ ಬ್ಯಾರೆಲ್ ಗನ್ ತಂದುಕೊಟ್ಟರು. ಅದು ನಿಜವಾಗಿ ಡಮ್ಮಿ ಗನ್ ಆಗಿರಬೇಕಿತ್ತು. ವಿಷ್ಣು ಆವೇಶದಲ್ಲಿ ಸಂಭಾಷಣೆ ಒಪ್ಪಿಸಿ ರಾಜ್ ಕಡೆಗೆ ಗುರಿಯಿಟ್ಟು ಟ್ರಿಗರ್ ಒತ್ತಲು ರೆಡಿ ಆಗುತ್ತಿದ್ದರು.

ಇನ್ನರ್ಧ ಕ್ಷಣದಲ್ಲಿ ಗುಂಡು ಹಾರಿಸಿ ಆಗುತ್ತಿತ್ತು. ಅಷ್ಟು ಹೊತ್ತಿಗೆ ಆ ಅರಣ್ಯದ ಫಾರೆಸ್ಟ್ ಆಫೀಸರ್ ಪ್ರಭಾಕರ್ ಎಂಬವರು ಏದುಸಿರು ಬಿಡುತ್ತ ಓಡಿಕೊಂಡು ಶೂಟಿಂಗ್ ಸ್ಪಾಟ್ ತಲುಪಿದ್ದರು! ಅವರು ಕಿರುಚಿ ಹೇಳಿದ್ದು ಒಂದೇ ಮಾತು – ವಿಷ್ಣು, ಡ್ರಾಪ್ ದ ಗನ್. ಗುಂಡು ಹಾರಿಸಬೇಡಿ. ಅದು ನಿಜವಾದ ಗನ್. ಅದರಲ್ಲಿ ಜೀವಂತವಾದ ಬುಲ್ಲೆಟ್ ಇದೆ!

ವಿಷ್ಣು ನಿಂತಲ್ಲಿಯೇ ಕುಸಿದರು. ರಾಜ್, ನಿರ್ದೇಶಕ ವಿಜಯ್, ಅಲ್ಲಿ ಇದ್ದವರೆಲ್ಲರೂ ಬೆವತು ಹೋದರು! ಆ ಫಾರೆಸ್ಟ್ ಆಫೀಸರ್ ಪ್ರಭಾಕರ್ ಓಡಿಕೊಂಡು ಬರುವುದು ಒಂದರ್ಧ ಕ್ಷಣ ತಡ ಆಗಿದ್ದರೂ ಆಗಬಹುದಾದ ಅನಾಹುತವನ್ನು ಕಲ್ಪನೆ ಮಾಡಿದರೆ ನನಗೆ ಈಗಲೂ ಮೈ ಬೆವರುತ್ತದೆ! ಕನ್ನಡ ಸಿನೆಮಾ ರಂಗವು ಮತ್ತೆ ತಲೆಯನ್ನು ಎತ್ತಲು ಸಾಧ್ಯವೇ ಇರಲಿಲ್ಲ.

ರಾಜಕುಮಾರ್ ಅವರಿಗೆ ಸಣ್ಣ ಗಾಯ ಆಗಿದ್ದರೂ ಇಡೀ ಕರ್ನಾಟಕಕ್ಕೆ ಬೆಂಕಿ ಬೀಳುತಿತ್ತು! ವಿಷ್ಣುವರ್ಧನ್ ಎಂಬ ಹೊಸ ನಟನ ಮೇಲೆ ಬಹಳ ದೊಡ್ಡ ಕಪ್ಪು ಚುಕ್ಕೆ ಶಾಶ್ವತವಾಗಿ ಉಳಿದು ಹೋಗುತ್ತಿತ್ತು!

ನಿಜವಾಗಿ ಏನಾಗಿತ್ತು ಎಂದರೆ ಫಾರೆಸ್ಟ್ ಆಫೀಸರ್ ಎಲ್ಲ ಸಿನೆಮಾ ತಂಡದವರನ್ನು ತನ್ನ ಆಫೀಸಿಗೆ ಊಟಕ್ಕೆ ಕರೆದಿದ್ದರು. ಆಗ ಪ್ರಾಪರ್ಟಿಗಳ ಹೊಣೆ ಹೊತ್ತ ಯಾರದೋ ಒಬ್ಬ ವ್ಯಕ್ತಿಯ ಬೇಜವಾಬ್ದಾರಿಯಿಂದ ಡಮ್ಮಿ ಗನ್ ಇರಬೇಕಾದ ಸ್ಥಳದಲ್ಲಿ ಅದೇ ರೀತಿಯ ಜೀವಂತ ಗನ್ ಬಂದು ಕೂತಿತ್ತು!

ಮುಂದೆ ಸಿನೆಮಾ ಶೂಟಿಂಗ್ ಮುಗಿದು ಸಿನೆಮಾ ಸೂಪರ್ ಹಿಟ್ ಆಯಿತು. ಆದರೆ ಮುಂದಿನ ಎರಡು ವರ್ಷಗಳ ಕಾಲ ವಿಷ್ಣು ಅತೀವ ಮಾನಸಿಕ ಮತ್ತು ದೈಹಿಕ ಹಿಂಸೆ ಪಡಬೇಕಾಯಿತು! ವಿಷ್ಣು ನಿರಪರಾಧಿ ಎಂದು ಅಲ್ಲಿದ್ದ ಎಲ್ಲರಿಗೂ ಗೊತ್ತಿತ್ತು. ರಾಜ್ ಅದನ್ನು ಬಹಿರಂಗವಾಗಿ ಹೇಳಿದ್ದರು. ಆದರೆ ಅಭಿಮಾನಿಗಳು ಕೇಳಬೇಕಲ್ಲ! ಸಾಲದ್ದಕ್ಕೆ ಮಾಧ್ಯಮಗಳು ಅದನ್ನು ಅತೀ ರಂಜಿತವಾಗಿ ವರದಿ ಮಾಡಿದವು. ಅಲ್ಲಿಗೆ ವಿಷ್ಣುವರ್ಧನ್ ತೇಜೋವಧೆಯು ಆರಂಭವಾಯಿತು.

ಅದೇ ವರ್ಷ ವಿಷ್ಣು ತನ್ನ ಪ್ರೀತಿಯ ತಂದೆಯನ್ನು ಕಳೆದುಕೊಂಡು ದುಃಖದಲ್ಲಿ ಇದ್ದರು. ಅದರ ಜೊತೆಗೆ ಈ ಹಿಂಸೆಯು ಅವರನ್ನು ಚಿಂದಿ ಮಾಡಿ ಹಾಕಿತು. ಅವರು ಮನೆಯಿಂದ ಹೊರಬಂದಾಗ ಅವರ ಮೇಲೆ ಕಲ್ಲಿನ ದಾಳಿ ಆಯಿತು. ಹಣೆಗೆ ಪೆಟ್ಟಾಯಿತು. ರಕ್ತಧಾರೆಯಾಗಿ ಹರಿಯಿತು.

ಅವರ ಸಿನಿಮಾಗಳ ಪೋಸ್ಟರನ್ನು ಹರಿದು ಹಾಕಲಾಯಿತು. ಸಿನೆಮಾ ಶೂಟಿಂಗ್ ಸ್ಪಾಟಿಗೆ ಬಂದು ಬೆದರಿಕೆ ಹಾಕಲಾಯಿತು. ಅವರ ಮನೆಯ ಮೇಲೆ ಕಲ್ಲಿನ ದಾಳಿ ನಡೆಯಿತು. ಮನೆಯವರಿಗೆ ಅನಾಮಧೇಯ ಬೆದರಿಕೆ ಕರೆಗಳು ಬರಲು ತೊಡಗಿದವು.

ಸ್ವತಃ ರಾಜ್ ಈ ಹುಚ್ಚಾಟವನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ವಿಷ್ಣು ಮೇಲೆ ದಾಳಿ ಅವ್ಯಾಹತವಾಗಿ ಮುಂದುವರೆಯಿತು. ವಿಷ್ಣು ತಾಳ್ಮೆ ಕಳೆದುಕೊಳ್ಳದೆ ಸಹಿಸಿಕೊಂಡದ್ದು ನಿಜವಾಗಿಯೂ ಗ್ರೇಟ್. ಬೇರೆ ಯಾರಾದರೂ ಸಿನಿಮಾ ಸಹವಾಸ ಸಾಕು ಎಂದು ಬಿಟ್ಟು ಹೋಗುತ್ತಿದ್ದರು.

ನಿನ್ನನ್ನು ನೋಡಿಕೊಳ್ಳುತ್ತೇವೆ, ನಿನ್ನ ಸಿನಿಮ ರಿಲೀಸ್ ಮಾಡಲು ಬಿಡುವುದಿಲ್ಲ, ನಿನ್ನ ಸಿನೆಮಾ ಲೈಫ್ ಮುಗಿದು ಹೋಯಿತು…ಹೀಗೆಲ್ಲಾ ಬೈಗುಳ ವಿಷ್ಣುವರ್ಧನ್ ಕೇಳಬೇಕಾಯಿತು. ಅದೇ ಹೊತ್ತಿಗೆ ಸಿನೆಮಾ ರಂಗದಲ್ಲಿ ಅಂಬೆಕಾಲು ಇಡುತ್ತಿದ್ದ ಒಬ್ಬ ಸ್ಫುರದ್ರೂಪಿ ನಟನ ಸಿನೆಮಾ ಬದುಕು ಮುಗಿದು ಹೋಯಿತು ಎಂಬಂತೆ ಪತ್ರಿಕೆಗಳು ಬರೆದವು.

ಆದರೆ ರಾಜ್ ಮತ್ತು ವಿಷ್ಣು ಪ್ರೀತಿ ಕೊನೆಯವರೆಗೆ ಒಂದೇ ರೀತಿ ಇತ್ತು. ಮುಂದೆ ಗೋಕಾಕ್ ಚಳುವಳಿಯಲ್ಲಿ ರಾಜ್ ಧುಮುಕಿದಾಗ ವಿಷ್ಣು ಅವರ ಬಲಭಾಗದಲ್ಲಿ ನಿಂತು ಹೋರಾಟ ಮಾಡಿದರು. ಮುಂದೆ ವಿಷ್ಣುವರ್ಧನ್ ಮತ್ತು ರಾಜಕುಮಾರ್ ಯಾವ ಸಿನೆಮಾದಲ್ಲಿ ಕೂಡ ಜೊತೆಯಾಗಿ ನಟಿಸಲು ಆಗಲೇ ಇಲ್ಲ ಎನ್ನುವುದು ಕನ್ನಡ ಸಿನೆಮಾರಂಗದ ದುರಂತ ಎಂದೇ ನನ್ನ ಭಾವನೆ.

ಮುಂದೆ ತನ್ನ ಸ್ವಂತ ಮತ್ತು ಅಭಿಜಾತ ಪ್ರತಿಭೆಯಿಂದ ವಿಷ್ಣುವರ್ಧನ್ ಕನ್ನಡದಲ್ಲಿ ನಂಬರ್ ಟೂ ಸ್ಥಾನವನ್ನು ಏರಿದರು. ಇನ್ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯ ಮಾಡಿದರು. ಅಭಿನಯ ಭಾರ್ಗವ, ಸಾಹಸ ಸಿಂಹ ಎಂದೆಲ್ಲ ತನ್ನ ಅಭಿಮಾನಿಗಳಿಂದ ಕರೆಸಿಕೊಂಡರು. ಅಭಿನಯಕ್ಕೆ ಆರು ರಾಜ್ಯಪ್ರಶಸ್ತಿ ಪಡೆದರು. ಕನ್ನಡ, ಹಿಂದೀ, ತಮಿಳು, ಮಲಯಾಳಂ, ತೆಲುಗು ಸಿನೆಮಾಗಳಲ್ಲಿ ಅಭಿನಯ ಮಾಡಿದರು.

ಭೂತಯ್ಯನ ಮಗ ಅಯ್ಯು, ಬಂಧನ, ಹೊಂಬಿಸಿಲು, ನಾಗರ ಹಾವು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಸಾಹಸ ಸಿಂಹ, ಜೀವನ ಚಕ್ರ, ಯಜಮಾನ, ಮುತ್ತಿನ ಹಾರ, ಕಿಲಾಡಿ ಜೋಡಿ, ಹಾಲುಂಡ ತವರು, ಸುಪ್ರಭಾತ, ಮಲಯ ಮಾರುತ ಮೊದಲಾದ ಸಿನೆಮಾಗಳಲ್ಲಿ ಅವರು ಮಾಡಿದ ಅಭಿನಯವನ್ನು ಬೇರೆ ಯಾರೂ ಮಾಡಲು ಸಾಧ್ಯವೇ ಇಲ್ಲ! ಕನ್ನಡದ ಅತ್ಯಂತ ಸ್ಫುರದ್ರೂಪಿ ಹಾಗೂ ಅತ್ಯುತ್ತಮ ನಟ ಅವರು ಅನ್ನುವುದಕ್ಕೆ ಅವರ ನೂರಾರು ಸಿನೆಮಾಗಳು ಸಾಕ್ಷಿ ನುಡಿಯುತ್ತವೆ.

ವಿಷ್ಣುವರ್ಧನ್ 2009 ಡಿಸೆಂಬರ್ ತಿಂಗಳಲ್ಲಿ ನಮ್ಮನ್ನು ಆಗಲಿದಾಗ ಇಡೀ ಕನ್ನಡ ನಾಡು ಕಣ್ಣೀರು ಹರಿಸಿತ್ತು. ಆದರೆ ಕನ್ನಡಿಗರು ಅವರನ್ನು ಎಂದಿಗೂ ಮರೆಯಲಿಲ್ಲ. ಬೆಂಗಳೂರಿನಲ್ಲಿ ಬನಶಂಕರಿಯಿಂದ ಕೆಂಗೇರಿಗೆ ಕನೆಕ್ಟ್ ಆಗುವ 14.5 ಕಿಲೋಮೀಟರ್ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ. ಜಯನಗರದಲ್ಲಿ ವಿಷ್ಣು ಹೆಸರಿನ ಪಾರ್ಕ್ ಇದೆ. ಹತ್ತಾರು ಕಡೆ ಅವರ ಪ್ರತಿಮೆಗಳು ಇವೆ. ಅದಕ್ಕಿಂತ ಹೆಚ್ಚಾಗಿ ಕೋಟಿ ಕೋಟಿ ಕನ್ನಡಿಗರ ಹೃದಯಗಳಲ್ಲಿ ವಿಷ್ಣು ಎಂದಿಗೂ ಅಜರಾಮರ ಆಗಿದ್ದಾರೆ!

ಇನ್ನೊಂದು ವಾಕ್ಯ ನಾನು ಬರೆಯಲೇಬೇಕು. 2007ರಲ್ಲಿ ವಿಷ್ಣುಗೆ ಕನ್ನಡದ ವರ ನಟ ಡಾ. ರಾಜಕುಮಾರ್ ಅವರ ಹೆಸರಿನ ಜೀವಮಾನದ ಪ್ರಶಸ್ತಿ ಬಂದಿತ್ತು. ಆಗ ವಿಷ್ಣು ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿ ಗೊಳೋ ಎಂದು ಕಣ್ಣೀರು ಹಾಕಿದ್ದರು! ಅದು ಯಾಕೆಂದು ಅವರಿಗೆ ಮಾತ್ರ ಗೊತ್ತಿತ್ತು!

-ರಾಜೇಂದ್ರ ಭಟ್ ಕೆ

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!