ಉಡುಪಿ: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸೀ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿ ಕ್ರಾಫ್ಟ್ ವಿಲೇಜ್ ಮಾಡುವ ಬಗ್ಗೆ ಚಿಂತನೆ ಮತ್ತು ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ ಮತ್ತು ಕರಕುಶಲ ವಸ್ತುಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ದೆಹಲಿ ಹಾತ್ ಮಾದರಿಯಲ್ಲಿ ಕ್ರಾಫ್ಟ್ ವಿಲೇಜ್ ಮಾಡಲು ಸಾಧ್ಯವಿದ್ದು, ಆ ಮೂಲಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಂಡು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಎಕೋ ಟೂರಿಸಂ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಅರಣ್ಯಗಳಲ್ಲಿ ಟ್ರಕ್ಕಿಂಗ್ ಮೂಲಕ ಪ್ರವಾಸೋದ್ಯಮವನ್ನು ಅಭಿವೃಧ್ದಿಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮಗಳು ಇಲಾಖೆಗಳು ಜಂಟಿಯಾಗಿ ಪರಿಶೀಲಿಸಿ, ಪ್ರವಾಸಿಗರಿಗೆ ಅನುಕೂಲವಾಗುವ ಟ್ರಕ್ಕಿಂಗ್ ದಾರಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಪಡುಬಿದ್ರೆ ಕಡಲ ತೀರದಲ್ಲಿ ಸೈಕಲ್ ಸಕ್ರ್ಯೂಟ್ ಮತ್ತು ಕುಂದಾಪುರದ ಕೋಡಿ ಬೀಚ್ ನಿಂದ ಕೋಡಿತಲೆ ಡೆಲ್ಟಾ ಪಾಯಿಂಟ್ ವರೆಗೆ ಸೈಕಲ್ ಟ್ರಾಕ್ ನಿರ್ಮಿಸುವ ಬಗ್ಗೆ ಮತ್ತು ಕುಂದಾಪುರ ಕೋಡಿ ಸೀ ವಾಕ್ ಬಳಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಕುಂದಾಪುರ ಸೀ ವಾಕ್ ನಿಂದ ಗಂಗೋಳ್ಳಿ ಸೀ ವಾಕ್ ಗೆ ಸಂಪರ್ಕ ಕಲ್ಪಿಸುವ ಕುರಿತು ಚರ್ಚೆ ನಡೆಯಿತು.
ಪ್ರಸ್ತುತ ಜಿಲ್ಲೆಯಲ್ಲಿ ಹೋಂ ಸ್ಟೇ ಪರವಾನಿಗೆಗೆ ನಿರಪೇಕ್ಷಣಾ ಪತ್ರವನ್ನು ಪೊಲೀಸ್ ಅಧೀಕ್ಷಕರಿಂದ ಪಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದರಿಂದ ಇನ್ನು ಮುಂದೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ವೃತ್ತ ನಿರೀಕ್ಷಕರಿಂದ ಪಡೆಯುವ ಬಗ್ಗೆ ಚರ್ಚೆ ನಡೆಯಿತು.
ಸೈಂಟ್ ಮೇರಿಸ್ ದ್ವೀಪದ ಬಳಿ 420 ಲಕ್ಷ ರೂ ವೆಚ್ಚದಲ್ಲಿ ಫೆರ್ರಿ ಜೆಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಕುರಿತಂತೆ ಈಗಾಗಲೇ ಸರ್ವೇ ಕಾರ್ಯ ಮುಕ್ತಾಯಗೊಂಡಿದ್ದು, ಸಿಆರ್ ಝಡ್ ವತಿಯಿಂದ ನಿರಾಪೇಕ್ಷಣಾ ಪತ್ರ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.
ತ್ರಾಸಿ ಮರವಂತೆ ಕಡಲ ತೀರದಲ್ಲಿ 1000 ಲಕ್ಷ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿ ಕೈಗೊಳ್ಳಲು ಈಗಾಗಲೇ 250 ಲಕ್ಷ ಬಿಡುಗಡೆಯಾಗಿದೆ, 1500 ಲಕ್ಷ ವೆಚ್ಚದಲ್ಲಿ ಪಡುವರಿ ಸೋಮೇಶ್ವರ ಬೀಚ್ ಅಭಿವೃಧ್ದಿಗೆ ಕಾಮಗಾರಿಗೆ ಈಗಾಗಲೇ 300 ಲಕ್ಷ ಬಿಡುಗಡೆಯಾಗಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಡಿಪಿಆರ್ ತಯಾರಿಸಲಾಗಿದೆ.
ಕಾರ್ಕಳದ ಉಮಿಕಲ್ ಕುಂಜಬೆಟ್ಟದಲ್ಲಿ 200 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಶುರಾಮ ಥೀಂ ಪಾರ್ಕ್ ಆಭಿವೃಧ್ದಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಮತ್ತಿತರರು ಉಪಸ್ಥಿತರಿದ್ದರು.