ಉಡುಪಿ: ನಾವು ಕೇವಲ ಮನೋರಂಜನೆಗಾಗಿ ಇರುವ ಕ್ರೀಡೆಗಳತ್ತ ಆಕರ್ಷಿತರಾಗಬಾರದು. ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಅನುಕೂಲವಾಗುವ ಮತ್ತು ದೇಹಕ್ಕೆ ಹೆಚ್ಚು ವ್ಯಾಯಾಮವನ್ನು ಕೊಡುವ ಆಟ ಶಟ್ಲ್ ಬ್ಯಾಡ್ಮಿಂಟನ್. ಮಕ್ಕಳು ಈ ಶಟ್ಲ್ ಬ್ಯಾಡ್ಮಿಂಟನ್ ಆಟದ ಅವಕಾಶವನ್ನು ಹೆಚ್ಚು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಉಡುಪಿ ಇವರ ಸಹಯೋಗದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿಗಳಾಗಿ ಭಾಗವಹಿಸಿದ ಅಜ್ಜರಕಾಡು ವಾರ್ಡ್ ಕೌನ್ಸಿಲರ್ ರಶ್ಮಿ ಸಿ ಭಟ್ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ಐದೂ ತಾಲೂಕುಗಳ ದೈಹಿಕ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು ಗ್ರೇಡ್ -೧ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಸಾಲಿಯಾನ್, ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಯಾನಂದ್, ಸಾಫಲ್ಯ ಟ್ರಸ್ಟ್ ನ ನಿರುಪಮಾ ಪ್ರಸಾದ ಶೆಟ್ಟಿ, ಎಸ್‌ಡಿಎಂಸಿ ಗೌರವಾಧ್ಯಕ್ಷೆ ತಾರಾದೇವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಮಣಿಪಾಲ ಮಹಿಳಾ ಸಮಾಜದ ಪದ್ಮಾ ಕಿಣಿ ಮುಂತಾದವರು ಭಾಗವಹಿಸಿದ್ದರು.
ಪ್ರಾಥಮಿಕ ಬಾಲಕ ಬಾಲಕಿಯರ ಎರಡೂ ವಿಭಾಗಗಳ ಪ್ರಥಮ ಸ್ಥಾನವನ್ನು ಕಾರ್ಕಳ ತಂಡ, ದ್ವಿತೀಯ ಸ್ಥಾನವನ್ನು ಕುಂದಾಪುರ ತಂಡ ಪಡೆಯಿತು. ಪ್ರೌಢ ಬಾಲಕ ಬಾಲಕಿಯರ ಎರಡೂ ವಿಭಾಗಗಳ ಪ್ರಥಮ ಸ್ಥಾನವನ್ನು ಕಾರ್ಕಳ ತಂಡ, ದ್ವಿತೀಯ ಸ್ಥಾನವನ್ನು ಉಡುಪಿ ತಂಡ ತನ್ನದಾಗಿಸಿಕೊಂಡವು.
ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ದಿವಾಕರ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಪಾಲ್ಗೊಂಡು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ವಸಂತ್ ಜೋಗಿ ಕಾರ್ಯಕ್ರಮವನ್ನು ಸಂಘಟಿಸಿದರು. ಶಿಕ್ಷಕಿ ಇಂದಿರಾ ವಂದಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.