ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿಯವರಿಗೆ ಗುಲಾಂ ನಬಿ ಆಜಾದ್ ಪತ್ರ ಬರೆದಿದ್ದು, 5 ಪುಟಗಳ ಪತ್ರದಲ್ಲಿ ಕಾಂಗ್ರೆಸ್ ತೊರೆದ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ.
ಪತ್ರದಲ್ಲಿ ಏನಿದೆ?
ರಾಹುಲ್ ಗಾಂಧಿ ಇನ್ನೂ ಪ್ರಬುದ್ಧವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗುಲಾಂ ನಬಿ ಖಾರವಾಗಿ ಬರೆದಿದ್ದಾರೆ. ಪಕ್ಷದಲ್ಲಿ ಸಮಾಲೋಚನಾ ಕಾರ್ಯವಿಧಾನವನ್ನು ರಾಹುಲ್ ಗಾಂಧಿ ಬುಡಮೇಲು ಮಾಡಿದ್ದಾರೆ. ಪಕ್ಷದ ನಿರ್ಧಾರಗಳಲ್ಲಿ ರಾಹುಲ್ ಗಾಂಧಿಯವರ ಸೆಕ್ಯೂರಿಟಿ ಗಾರ್ಡ್ ಗಳು, ಪಿಎಗಳೂ ಹಸ್ತಕ್ಷೇಪ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೊತೆಗೆ ತನಗಿದ್ದ ನಿಕಟ ಸಂಪರ್ಕವನ್ನು ಹಾಗೂ ಕಾಂಗ್ರೆಸ್ ನೊಂದಿಗೆ ಇದ್ದ ಸುದೀರ್ಘ ಸಂಬಂಧವನ್ನು ಪತ್ರದಲ್ಲಿ ಉಲ್ಲೇಖಿಸಿದ ಗುಲಾಂ ನಬಿ ಆಜಾದ್, ಕಾಂಗ್ರೆಸ್ ಪಕ್ಷಕ್ಕೆ ಗತ ವೈಭವ ಮರುಕಳಿಸುವುದು ಅಸಾಧ್ಯ.
2019 ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಬಹಳ ಶೋಚನೀಯವಾಗಿದ್ದು, ಪಕ್ಷದ ಬಲ ಕುಂಠಿತವಾಗುತ್ತಿದೆ. ‘ರಿಮೋಟ್ ಕಂಟ್ರೋಲ್’ ಮಾದರಿಯಿಂದ ಯುಪಿಎ ಸರ್ಕಾರದ ವರ್ಚಸ್ಸು ಹಾಳು ಮಾಡಿತು. ಇದೇ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದು ಬೇಸರದ ಸಂಗತಿ. ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ರಾಹುಲ್ ಗಾಂಧಿ ಮೂಲೆ ಗುಂಪು ಮಾಡಿದ್ದಾರೆ. ಸೋನಿಯಾ ಗಾಂಧಿ ನಾಯಕತ್ವದ ಬಗ್ಗೆ ಗುಲಾಂ ನಬಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.