ಕಾರ್ಕಳ: ಸಣ್ಣ ವಯಸ್ಸಿನಿಂದಲೇ ಹೂಡಿಕೆಯನ್ನು ಆರಂಭ ಮಾಡಿದರೆ ಅದರಿಂದ ದೊರಕುವ ಪ್ರತಿಫಲ ದೊಡ್ಡ ಮೊತ್ತದ್ದಾಗಿರುತ್ತದೆ. ಖರ್ಚು ಮಾಡಿ ಉಳಿಕೆ ಹಣವನ್ನು ಉಳಿತಾಯ ಮಾಡುವ ಬದಲು ಉಳಿತಾಯ ಮಾಡಿದ ನಂತರ ಉಳಿದ ಹಣವನ್ನು ಖರ್ಚು ಮಾಡುವ ಮೂಲಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಮಾಡುವುದು ಹೆಚ್ಚು ಸೂಕ್ತ ಎಂದು ಶ್ರೀ ಧವಲಾ ಕಾಲೇಜು ಮೂಡಬಿದಿರೆ ಇದರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಾರ್ಶ್ವನಾಥ ಅಜ್ರಿ ಹೇಳಿದರು.
ಅವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇದರ ಐ.ಕ್ಯೂ.ಎ.ಸಿ, ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಉದ್ಯೋಗ ಮತ್ತು ಮಾಹಿತಿ ಕೋಶ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಾಪಕರ ಸಂಘ ರಿ. ‘ಮುಕ್ತಾ ‘ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ಹೂಡಿಕೆದಾರರ ಮಾಹಿತಿ ಕಾರ್ಯಗಾರವನ್ನು ಕುರಿತು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರವಿರಾಜ್ ನಾಯ್ಕ್ ಅವರು ಕಾರ್ಯಗಾರವನ್ನು ಉದ್ಘಾಟಿಸಿ ಹೂಡಿಕೆಯ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಾಣಿಜ್ಯ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಷ್ಮಾ ರಾವ್ ಕೆ., ಉದ್ಯೋಗ ಮತ್ತು ಮಾಹಿತಿ ಕೋಶದ ಸಂಯೋಜಕರಾದ ನವೀನ್, ಸುಬ್ರಹ್ಮಣ್ಯ ಕೆ ಸಿ., ಮೈತ್ರಿ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಆರ್ಥಿಕ ಸಾಕ್ಷರತೆ, ಹಣದ ಸಮಯ ಮೌಲ್ಯ ಮತ್ತು ವೈಯಕ್ತಿಕ ಹೂಡಿಕೆ ಯೋಜನೆ ಈ ವಿಷಯಗಳ ಬಗ್ಗೆ ನವೀನ್ ಜೂಲಿಯನ್ ರೇಗೊ, ಲಿಯೋ ಅಮಲ್ ಎ, ಎಲ್‌ಸ್ಟನ್ ಮೆನೇಜಸ್ ಹಾಗೂ ಸಪ್ನಾ ಶೆಣೈ ಎಂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ಮಂಜುನಾಥ ಬಿ., ಗಣೇಶ್ ಎಸ್., ದಿವ್ಯ ಪ್ರಭು ಪಿ., ಜ್ಯೋತಿ ಶೆಟ್ಟಿ ಎಸ್., ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.