ಉಡುಪಿ: ಗ್ರಾಮೀಣ ಭಾಗದ ಜನರ ಆಶೋತ್ತರಗಳನ್ನು ಅವರ ಬಳಿಯೇ ಬಂದು ಕೇಳಿ, ಬಗೆಹರಿಸಬೇಕೆಂಬ ಆಶಯದೊಂದಿಗೆ ಸರಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ಹಿರ್ಗಾನ ಗ್ರಾಮಕ್ಕೆ ಬಂದು ಇಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.
ಅವರು ಕಾರ್ಕಳ ತಾಲೂಕು ಅಜೆಕಾರು ಹೋಬಳಿಯ ಹಿರ್ಗಾನ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಂದಾಯ ಸಚಿವರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಯನ್ನು ಹುಡುಕಿ ಹೋಗದೇ ತಮ್ಮ ಮನೆಯ ಬಾಗಿಲ ಬಳಿಯೇ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬೇಕೆಂಬ ಧ್ಯೇಯದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಕಂದಾಯ ಇಲಾಖೆಯ ದಾಖಲೆಗಳನ್ನು ಸರಿಪಡಿಸುವುದು, ರಸ್ತೆಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಅರಣ್ಯ ಇಲಾಖೆಗೆ ಮರಗಳನ್ನು ತೆರವುಗೊಳಿಸುವುದು ಮತ್ತಿತರ ಅರ್ಜಿಗಳು ಬಂದಿದ್ದು, ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುವುದು ಎಂದ ಅವರು, ಸಾಮಾಜಿಕ ಭದ್ರತೆ ಕೋರಿ ಬಂದ ಅರ್ಜಿಗಳನ್ನು ಅರ್ಹರಿಗೆ ಸ್ಥಳದಲ್ಲಿ ಮಂಜೂರಾತಿ ಆದೇಶ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಈ ಹಿಂದೆ ಸಾರ್ವಜನಿಕರು ಇಲಾಖೆಗೆ ಸಂಬಂಧಪಟ್ಟ ಕೆಲಸಗಳಿಗೆ ಅಲೆಯುವ ಪರಿಸ್ಥಿತಿ ಇದ್ದು, ಇತ್ತೀಚೆಗೆ ಆ ಕ್ರಮ ಬದಲಾಗಿ ಆಡಳಿತ ವರ್ಗಗಳೇ ನೇರವಾಗಿ ಜನರನ್ನು ತಲುಪಿ, ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡಿ, ಬಗೆಹರಿಸುತ್ತಿರುವುದು ಸರಕಾರದ ಉತ್ತಮವಾದ ಕೆಲಸವಾಗಿದೆ.
ಪ್ರಸ್ತುತ ಗ್ರಾಮದಲ್ಲಿ ಉತ್ತಮ ಅಧಿಕಾರಿಗಳ ವರ್ಗವಿದ್ದು, ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದಿಂದ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಪ್ರಗತಿಯತ್ತ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಂಚಣಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಹಾಗೂ ಇತರೆ ಫಲಾನುಭವಿಗಳಿಗೆ ಸರಕಾರದಿಂದ ನೀಡಬೇಕಾದ ಯೋಜನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ತಲುಪಿಸಲಾಯಿತು. ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಜನರು ತಮ್ಮ ವಿವಿಧ ಸಮಸ್ಯೆಗಳ 20 ಅರ್ಜಿಗಳನ್ನು ಸಲ್ಲಿಸಿದ್ದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಮಳೆಗಾಲದಲ್ಲಿ ಹರಡುವ ಕಾಯಿಲೆಯ ಬಗ್ಗೆ ಅರಿವು ಕಾರ್ಯಕ್ರಮದ ಮಾಹಿತಿ ಕಾರ್ಯಾಗಾರ ನಡೆಯಿತು.
ಕುಂದಾಪುರದ ಸಹಾಯಕ ಕಮೀಷನರ್ ರಾಜು ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಆಹಾರ ಇಲಾಖೆಯ ಉಪ ನಿರ್ದೇಶಕ ಇಸಾಕ್ ಮೊಹಮ್ಮದ್, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸಂಜೀವ ಪೂಜಾರಿ ನಿರೂಪಿಸಿದರು.