ಗಂಗೊಳ್ಳಿ: ರಾಜಕೀಯ ಹಿತಾಸಕ್ತಿಗಳನ್ನು ಪರಿಗಣಿಸದೆ ಸಮುದಾಯದ ಅಭಿವೃದ್ಧಿಯನ್ನೇ ಪ್ರಮುಖವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿದಾಗ ಮಾತ್ರ ಸಮುದಾಯದ ನೈಜ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಹೆಬ್ರಿಮನೆ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆಯ ಪ್ರಥಮ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಶಿಕ್ಷಣವೇ ಅಭಿವೃದ್ಧಿಯ ಮೂಲ. ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಎಲ್ಲ ಪೋಷಕರು ಮುತುವರ್ಜಿ ವಹಿಸಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಣ್ಣಪ್ಪ ಬಿಲ್ಲವ ಶುಭ ಹಾರೈಸಿದರು. ಲೀಲಾವತಿ ಪೂಜಾರಿ ವಿದ್ಯಾರ್ಥಿ ವೇತನ ವಿತರಿಸಿದರು. ಕಾರ್ಯಕ್ರಮದಲ್ಲಿ ಮುತ್ತ ಕುಂದರ್, ಜಿ.ಕೆ ವೆಂಕಟೇಶ್ ಕೊಡೇರಿ ಮನೆ, ಜಿ.ಎ. ಆರ್ ಲಕ್ಷ್ಮಣ ಉಪಸ್ಥಿತರಿದ್ದರು.
ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರಾಂಕ್ ಗಳಿಸಿದ ರಕ್ಷಿತಾ ಆರ್ ಪೂಜಾರಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ನಿಶಾ ಬಿ ಪೂಜಾರಿ ಹಾಗು ಹರ್ಷಿತ ಎಸ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಮಂಜುರಾಜ್ ಗಂಗೊಳ್ಳಿ ಸ್ವಾಗತಿಸಿದರು. ಅಕ್ಷತಾ ವಿನಯ್ ಪ್ರಾರ್ಥಿಸಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಆಕಾಶ್ ಪೂಜಾರಿ ಧನ್ಯವಾದ ಅರ್ಪಿಸಿದರು.