ಉಡುಪಿ: ಶುಚಿತ್ವ ಇಲ್ಲದೆ ಇರುವುದರಿಂದ ಮಕ್ಕಳಲ್ಲಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ ಆದ್ದರಿಂದ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದರು.
ಅವರು ಇಂದು ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಲಯನ್ಸ್ ಕ್ಲಬ್ ಉಡುಪಿ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಪ್ಪು ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಓದಿನ ಕಡೆ ಹೆಚ್ಚು ಗಮನ ನೀಡಲು ಆರೋಗ್ಯ ಬಹಳ ಮುಖ್ಯ. ಜಂತುಹುಳದ ಸಮಸ್ಯೆಯಿಂದ ಮಕ್ಕಳಲ್ಲಿ ರಕ್ತ ಹೀನತೆ ಉಂಟಾಗಿ ಅಪೌಷ್ಠಿಕತೆ ಕಂಡುಬರುತ್ತಿದ್ದು, ಮಕ್ಕಳ ಬೆಳವಣೆಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.
ಜಂತು ಹುಳದ ನಿವಾರಣೆಗೆ ಸ್ವಚ್ಛತೆ ಬಹಳ ಪ್ರಾಮುಖ್ಯವಾಗಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ಕೈ ಕಾಲುಗಳನ್ನು ಸ್ವಚ್ಛವಾಗಿರಿಸದೆ ಆಹಾರ ಸೇವನೆ ಮಾಡುವ ದುರಭ್ಯಾಸಗಳನ್ನು ನಿಲ್ಲಿಸಬೇಕು, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ಕೆ ಶಿವರಾಜ್ ಮಾತನಾಡಿ ನಮ್ಮಲ್ಲಿ ಉತ್ತಮ ಆರೋಗ್ಯ ಇಲ್ಲದೇ ಇದ್ದಲ್ಲಿ ಎಷ್ಟೇ ಸಂಪತ್ತು ಇದ್ದರೂ ಕೂಡ ಅವುಗಳು ನಿಷ್ಪçಯೋಜಕ, ಆರೋಗ್ಯವೇ ಭಾಗ್ಯ ಎಂಬಂತೆ, ನಮ್ಮ ಆರೋಗ್ಯದ ಕಾಳಜಿಯನ್ನು ನಾವೇ ಮಾಡುತ್ತಾ, ವಿದ್ಯಾರ್ಥಿಗಳೆಲ್ಲರೂ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳದ ಮಾತ್ರೆಯನ್ನು ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ವೈ.ಪಿ.ಸಿ ಸಮಗ್ರ ಶಿಕ್ಷಣ ಇಲಾಖೆಯ ಚಂದ್ರ ನಾಯ್ಕ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾ ಭಟ್, ಪೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಪೈ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಾತ್ವಿಕ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.