ಮಂಗಳೂರು: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು (ಸಿ.ಒ.ಡಿ.ಪಿ) ಪ್ರವರ್ತಿತ ಕಾಮಧೇನು ಮತ್ತು ಕಲ್ಪವೃಕ್ಷ ಮಹಾಸಂಘಗಳ 22 ಸದಸ್ಯ ಸ್ವ ಸಹಾಯ ಸಂಘಗಳಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸಿ.ಒ.ಡಿ.ಪಿ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿಸೋಜ, ಇಂಡಿಯನ್ ರೈಡ್ ಕ್ರೋಸ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷರಾದ ಸುಧಾಕರ್ ರೈ, ಮಂಗಳ ನರ್ಸಿಂಗ್ ಕಾಲೇಜ್ ಸಹ ಪ್ರಾಧ್ಯಪಕರು ಹಾಗೂ ಮಾನವ ಮತ್ತು ಮಕ್ಕಳ ಸಲಹೆಗಾರರಾದ ಯೋಗಿತ ವಿನೋದ್, ಸ್ಥಳೀಯ ಕಾರ್ಪೊರೇಟರ್ ಶಶಿಕಲಾ ಕಾವ, ಕಾಮಧೇನು ಮಹಾಸಂಘದ ಕಾರ್ಯದರ್ಶಿಯಾದ ನಾಗವೇಣಿ ಮತ್ತು ಕಲ್ಪವೃಕ್ಷ ಮಹಾಸಂಘದ ಅಧ್ಯಕ್ಷೆಯಾದ ಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಟಿ ಕಳಂಜೆ ನೃತ್ಯದ ಮೂಲಕ ಚಾಲನೆ ನೀಡಲಾಯಿತು. ಸುಧಾಕರ್ ರೈ ಇವರು, ಆಟಿ ಸಮಯದಲ್ಲಿ ತೆಗೆದುಕೊಳ್ಳುವ ಆಹಾರ ಪದಾರ್ಥಗಳು ನಮ್ಮ ಈ ಕರಾವಳಿ ಪ್ರದೇಶದ ಜನರಿಗೆ ಉತ್ತಮವಾದ ರೋಗ ಪ್ರತಿರೋಧಕ ಶಕ್ತಿಯನ್ನು ನೀಡುತ್ತಿದ್ದು ಸಸ್ಯಗಳು ಹಾಗೂ ವಿವಿಧ ರೀತಿಯ ಸೊಪ್ಪು ತರಕಾರಿಗಳು ನಮ್ಮ ಕರಾವಳಿಯಲ್ಲಿ ಹೇರಳವಾಗಿ ದೊರಕುವ ಕಾರಣ ಅದನ್ನು ಸೇವಿಸಿ ನಮ್ಮ ತುಳುನಾಡಿನ ಜನರು ಆರೋಗ್ಯವಂತರಾಗಲಿ ಎಂದರು.
ಯೋಗಿತ ವಿನೋದ್ ಮಾತನಾಡಿ, ನಮ್ಮ ಸಮಾಜವು ಮತ್ತು ನಮ್ಮ ಜನರು ಆರೋಗ್ಯವಂತರಾಗಬೇಕಾಗಿದ್ದರೆ ದೈಹಿಕ, ಮಾನಸಿಕ ಮತ್ತು ಆರೋಗ್ಯಭರಿತ ಚಿಂತನೆ ಇರಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಅಲೋಚನೆಗಳನ್ನು ಯಾವಗಲೂ ಧನಾತ್ಮಕವಾಗಿರಿಸಬೇಕು ಎಂದು ಮಾನಸಿಕ ಆರೋಗ್ಯದ ಬಗ್ಗೆ ಬೆಳಕನ್ನು ಚೆಲ್ಲಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜರವರು, ನಾವು ನಮ್ಮ ಸಂಸ್ಕೃತಿಯಲ್ಲಿನ ಒಳ್ಳೆಯ ಹಾಗೂ ಮೌಲ್ಯಾಧಾರಿತ ಅಂಶಗಳನ್ನು ಮುಂದಿನ ಪೀಳಿಗೆಗಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಸ್ಥಳೀಯ ವಾರ್ಡಿನ ಕಾರ್ಪೊರೇಟರ್ ಶಶಿಕಲಾ ಕಾವರವರು್ ಸಭೆಯನ್ನು ಉದ್ದೇಶಿಸಿ ಶುಭ ಹಾರೈಸಿದರು ಮತ್ತು ೩೫೦ ಮಂದಿ ಸ್ವ ಸಹಾಯ ಸಂಘದ ಸದಸ್ಯರಿಗೆ ಉಚಿತವಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ದೊರಕಿದ ಸೊಳ್ಳೆ ಪರದೆಯನ್ನು ವಿತರಿಸಿದರು.
ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕರಾದ ರವಿ ಕುಮಾರ್ ಕ್ರಾಸ್ತ, ರೀಟಾ ಡಿಸೋಜ ಹಾಗೂ ಕಾರ್ಯಕರ್ತೆ ಕಲಾ ಗಿರೀಶ್‌ರವರು ಉಪಸ್ಥಿತರಿದ್ದರು. ಸ್ನೇಹ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.