ಬರ್ಮಿಂಗ್ಹ್ಯಾಮ್: ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ 61 ಪದಕಗಳನ್ನು ಗೆದ್ದಿದೆ. ಕಳೆದ ಬಾರಿ ಭಾರತ 66 ಪದಕಗಳನ್ನು ಗೆದ್ದಿತ್ತು. ಈ ಬಾರಿ ಕಾಮನ್ವೆಲ್ತ್ ಕ್ರೀಡೆಯಲ್ಲಿ ಶೂಟಿಂಗ್ ಸೇರ್ಪಡೆಗೊಳಿಸದಿದ್ದರೂ ಭಾರತದ ಕಾಮನ್ವೆಲ್ತ್ ಸಾಧನೆ ಸ್ವರ್ಣಾಕ್ಷರದಲ್ಲಿ ಬರೆದಿಡುವಂತದ್ದು ಅಂದರೆ ಅತಿಶಯವಾಗದು.
ಈ ಬಾರಿ ನಮಗೆ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳು. ಇಂಗ್ಲೆಂಡ್ ನಲ್ಲಿ ನಮ್ಮ ಕ್ರೀಡಾಪಟುಗಳ ಅತ್ಯದ್ಭುತ ಸಾಮರ್ಥ್ಯ ಅನಾವರಣಗೊಂಡಿತು. ಕುಸ್ತಿಯಲ್ಲಿ ಭಾರತದ ಪ್ರಾಬಲ್ಯ ಮತ್ತೊಮ್ಮೆ ಮುಂದುವರಿದಿದೆ. ಕುಸ್ತಿಯಲ್ಲಿ ನಮಗೆ ಸಿಕ್ಕಿದು 6 ಚಿನ್ನ ಸೇರಿ ಒಟ್ಟು 12 ಪದಕಗಳು. ಭಾರ ಎತ್ತುವ ಸ್ಪರ್ಧೆಯಲ್ಲಿ 10 ಪದಕಗಳನ್ನು ಹೆಮ್ಮೆಯ ಕ್ರೀಡಾಪಟುಗಳು ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಚೊಚ್ಚಲ ಕಾಮನ್ವೆಲ್ತ್ ಸಿಂಗಲ್ಸ್ ಸ್ವರ್ಣ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಡಬಲ್ಸ್ ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಹಾಕಿಯಲ್ಲಿ ಭಾರತ ರಜತ ಪದಕಕ್ಕೆ ತೃಪ್ತಿ ಪಟ್ಟಿದೆ.
ಟೇಬಲ್ ಟೆನ್ನಿಸ್ ನಲ್ಲಿ ಶರತ್ ಕಮಲ್ ಸ್ವರ್ಣ ಪದಕ ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ಅನಾವರಣಗೊಳಿಸಿದ್ದಾರೆ. ಹೈ ಜಂಪ್, 10ಕಿಮೀ ರೇಸ್ ವಾಕ್, ಜ್ಯಾವೆಲಿನ್, ಹಾಕಿ, ಪವರ್ಲಿಫ್ಟಿಂಗ್, ಸ್ಕ್ವಾಶ್, ಪ್ಯಾರಾ ಟೇಬಲ್ ಟೆನ್ನಿಸ್, ಲಾಂಗ್ ಜಂಪ್, ಜ್ಯಾವೆಲಿನ್, ಟ್ರಿಪಲ್ ಜಂಪ್, 3000ಮಿ ಸ್ಟೀಪಲ್ಚೇಸ್, ಜೂಡೋ, ಲಾನ್ ಬೌಲ್, ಬಾಕ್ಸಿಂಗ್, ಟಿ20 ಕ್ರಿಕೆಟ್ ಹೀಗೆ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ತನ್ಮೂಲಕ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ಅವಿಸ್ಮರಣೀಯವಾಗಿದೆ.