ಮಂಗಳೂರು: ಡಾ. ಪಿ. ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿನ ಸಂಸ್ಕೃತ ಮತ್ತು ಕನ್ನಡ ವಿಭಾಗ ಹಾಗೂ ಐ.ಕ್ಯೂ.ಎ.ಸಿ ಸಹಯೋಗದಲ್ಲಿ “ಸಂಸ್ಕೃತ ಭಾಷಾಯಾಃ ಮಹತ್ವಂ” ಎಂಬ ವಿಷಯದಲ್ಲಿ ಸಂಸ್ಕೃತ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
“ಸಂಸ್ಕೃತ ಭಾಷಾಯಾಃ ಮಹತ್ವಂ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಗರದ ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಎನ್. ರಮೇಶ್ ಆಚಾರ್ಯರವರು ಸಂಸ್ಕೃತ ಭಾಷೆ ಸುಮಧುರಾ, ಭಾರತದ ಆತ್ಮ, ಎಲ್ಲಾ ಭಾಷೆಗಳ ಮೂಲ.
ಸಂಸ್ಕೃತ ಭಾಷೆಯಲ್ಲಿ ಅನೇಕ ಕಾವ್ಯಗಳು ರಚನೆಯಾಗಿದೆ. ಕಾವ್ಯಾತ್ಮಕವಾಗಿ ಹೇಳಿದ ಮಾತು ಮನಸ್ಸಿಗೆ ಹಿತವಾಗಿರುತ್ತದೆ. ಅಂತಹ ಸಂಸ್ಕೃತ ಕಾವ್ಯಗಳನ್ನು ನಾವೆಲ್ಲರೂ ಓದಿ ತಿಳಿಯಬೇಕು. ಸಂಸ್ಕೃತದಲ್ಲಿ ವಿಜ್ಞಾನ, ವಾಣಿಜ್ಯ ಎಲ್ಲವೂ ಅಡಗಿದೆ. ಸುಶ್ರುತಸಂಹಿತೆ, ಚರಕಸಂಹಿತೆ, ಬೃಹತ್ ಸಂಹಿತೆ, ಕೌಟಲೀಯ ಅರ್ಥಶಾಸ್ತ್ರ ಇವುಗಳಲ್ಲಿರುವ ವಿಚಾರವನ್ನು ಮನಮುಟ್ಟುವಂತೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ರವಿಕುಮಾರ ಎಂ.ಪಿ., ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರಾಣಿಶಾಸ್ತ್ರ ಮುಖ್ಯಸ್ಥರು ಮತ್ತು ಮುಖ್ಯ ಶೈಕ್ಷಣಿಕ ಸಂಯೋಜಕರಾದ ಡಾ. ವಸಂತಿ ಪಿ. ಮಾತನಾಡಿ ಎಲ್ಲದರಲ್ಲೂ ಸಂಸ್ಕೃತ ಭಾಷೆ ಅಂತರ್ಗತವಾಗಿದೆ ಎಂದರು.
ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಪ್ರಭಾ ಎಸ್.ಎನ್ ಸಂಸ್ಕೃತದಲ್ಲಿಯೇ ನಿರೂಪಿಸಿ, ವಿದ್ಯಾಲಕ್ಷ್ಮೀ ಎಲ್ಲರನ್ನೂ ವಂದಿಸಿದರು. ಸಂಸ್ಕೃತ ವಿದ್ಯಾರ್ಥಿಗಳಾದ ಜ್ಯೋತಿಕಾ ಮತ್ತು ತಂಡದವರು ಪ್ರಾರ್ಥಿಸಿದರು. ಸಂಸ್ಕೃತ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಡಲಾಯಿತು.