ಮಂಗಳೂರು: ನಾವು ಅನುಭವಿಸುತ್ತಿರುವ ಈಗಿನ ಸ್ವಾತಂತ್ರ್ಯದ ಹಿಂದೆ ಯೋಧರ ತ್ಯಾಗ ಮತ್ತು ಬಲಿದಾನವಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಕಾರ್ಗಿಲ್ ವಿಜಯ ದಿವಸ್ ಹಾಗೂ ಅಗ್ನಿಪಥ್ ಅಭಿವಿನ್ಯಾಸ ಕಾರ್ಯಕ್ರಮವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸೈನಿಕರ ತ್ಯಾಗ, ಸಾಹಸ ಹಾಗೂ ದೇಶಸೇವೆ ಮಾಡುವ ಉತ್ತಮ ಅವಕಾಶಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಸಂಪನ್ಮೂಲ ವ್ಯಕ್ತಿ, ನಿವೃತ್ತ ಸೈನಿಕರಾದ ವಿಜಯನ್
ಮಾತನಾಡಿ, ಅಗ್ನಿಪಥ್ ಹಾಗೂ ಭಾರತೀಯ ಸೈನ್ಯದ ಹಲವು ಹುದ್ದೆಗಳಿಗೆ ಸೇರಲು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿ, ನಿವೃತ್ತ ಸೈನಿಕರಾದ ಶಿವರಾಮ್ ಭಟ್ ಅವರು ಭಾರತೀಯ ಸೈನ್ಯಕ್ಕೆ ಸೇರುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ವಹಿಸಿ ಮಾತನಾಡಿದರು.
ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ನಿವೃತ್ತ ಸೈನಿಕರಾದ ಜೆಫ್ರಿ ರಾಡ್ರಿಗ್ರಸ್ ಕೆ. ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಮೂವರು ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ರಾಜೇಂದ್ರ ಕುಮಾರ್ ಮತ್ತು ರಮೇಶ್ ಹೆಗ್ಡೆ, ಕಾಲೇಜು ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ಸುಧಾಕರನ್ ಟಿ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ. ನವೀನ್ ಕೊಣಾಜೆ ನಿರೂಪಿಸಿದರು. ಲೋಹಿತ್ ಸ್ವಾಗತಿಸಿ, ಶಿವಾನಿ ವಂದಿಸಿದರು.