ಬೆಳ್ಮಣ್: ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ನಂದಳಿಕೆ ಪ್ರಶಾಂತ್ ಪೂಜಾರಿ ವಹಿಸಿದ್ದರು.
ಪತ್ರಕರ್ತರಾದ ಬರೆಪ್ಪಾಡಿ ರಾಮಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಮುಖಿ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲತೆಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಶಿಸ್ತು, ಸದಸ್ಯರ ಬಗ್ಗಟ್ಟು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವ ಶೈಲಿಯಲ್ಲೇ ಗಮನಿಸಬಹುದೆಂದರು.
ಶಶಿ ಕಿಚನ್ ಯೂಟ್ಯೂಬರ್ ಶಿರ್ವ ಶಶಿಕಲಾ ಕುಲಾಲ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಟಿ ತಿಂಗಳ ವೈಶಿಷ್ಟತೆ, ಈಗಿನ ಫಾಸ್ಟ್ಫುಡ್ ಹಾಗೂ ಮೊಬೈಲ್ ಯುಗದ ಈ ಕಾಲದ ಕುರಿತು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಘುವೀರ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್ ಮೊದಲಾದವರಿದ್ದರು.
ಅಬ್ಬನಡ್ಕ ಶ್ರೀ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಪ್ರಾರ್ಥನೆಗೈದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ
ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವರದಿ ವಾಚಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕರಾದ ಅಬ್ಬನಡ್ಕ ಪದ್ಮಶ್ರೀ ಸತೀಶ್
ಪೂಜಾರಿ ಅವರು ವಂದಿಸಿದರು.
ಪಾಡ್ದನ: ಕಾರ್ಯಕ್ರಮದಲ್ಲಿ ಲೀಲಾ ಜತೊಟ್ಟು, ಅಮಣಿ ಆಚಾರ್ಯ, ಸಂಜೀವಿ ಆಚಾರ್ಯ ಅವರು ತುಳು ಪಾಡ್ದನ ಹಾಡಿದರು. ತುಳು ಗಾದೆಗಳು: ಸಂಘದ ಬಾಲ ಪ್ರತಿಭೆ ನಿಯಾ ಶೆಟ್ಟಿ ಸುಮಾರು ೫೦ಕ್ಕೂ ಅಧಿಕ ತುಳು ಗಾದೆಗಳನ್ನು ಹೇಳಿದರು.
ವಿಶಿಷ್ಟ ಶೈಲಿಯಲ್ಲಿ ವೇದಿಕೆ ಅಲಂಕಾರ: ವೇದಿಕೆಯಲ್ಲಿ ತೆಂಗಿನಗರಿಯಲ್ಲಿ ಕಟ್ಟಿದ ಸೌತೆಕಾಯಿ, ಹಳೆಯ ಕಾಲದ ಗ್ಯಾಸ್ ಲೈಟ್, ಚೆನ್ನೆಮಣೆ, ಸೇರು-ಪಾವು, ಸಾಂಬಾರ ಮರಯಿ, ಮರದ ಮಣೆಗಳು, ಹಳೆಯ ಕಾಲದ ನಾಣ್ಯಗಳೊಂದಿಗೆ ವರ್ಣರಂಜಿತವಾಗಿ ವೇದಿಕೆಯನ್ನು ಸಂಘದ ಸದಸ್ಯ ಬೋಳ ಕೀರ್ತನ್ ಪೂಜಾರಿ ಅವರು ರಚಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮ, ಮನೋರಂಜನಾ ಆಟೋಟ ಸ್ಪರ್ಧೆಗಳು ಜರಗಿದವು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸದಸ್ಯೆ ಆರತಿ ಕುಮಾರಿ ನಿರೂಪಿಸಿದರು.
ಬಾಯಲ್ಲಿ ನೀರೂರಿಸಿದ ಆಟಿಡೊಂಜಿ ದಿನದ ೨೮ ಬಗೆ ಬಗೆಯ ಖಾದ್ಯಗಳು: ಪೆಜಕಾಯಿ ಚಟ್ನಿ, ಕುಕ್ಕುದ ಚಟ್ನಿ, ಕುಕ್ಕುದ ಉಪ್ಪಡ್, ಕುಡುತ ಚಟ್ನಿ, ಪುನರೆ ಪುಳಿತ ಚಟ್ನಿ, ತಿಮರೆ ಚಟ್ನಿ, ನುರ್ಗೆ ತೊಪ್ಪು, ತೊಂಜಕ್ ಬೊಲೆದ ಸುಕ್ಕ, ತೆಕ್ಕರೆ ತಲ್ಲಿ, ಉಪ್ಪಡ್ ಪಚ್ಚಿರ್, ಗೆಂಡದಡ್ಡೆ, ಹಪ್ಪಳ, ಸೆಂಡಿಗೆ, ಖಾರ ಮುಂಚಿ, ಉರ್ಪೆಲ್ ನುಪ್ಪು, ಕುಡುತ ಸಾರ್, ರೊಟ್ಟಿ ಪಾಯಸ, ಅರಿತ ಪಾಯಸ, ಜೀರಿಗೆದ ಕಷಾಯ, ಪೋಡಿ, ಬಚ್ಚಿರೆ ಬಜ್ಜೆಯಿ, ಅಲೆ (ಮಜ್ಜಿಗೆ), ಗುಜ್ಜೆದ ಗಟ್ಟಿ, ಗುಜ್ಜೆದ ಮುಲ್ಕ, ಅರೆಪುದ ಪುಂಡಿ, ಪತ್ರೊಡ್ಡೆ, ಚಿಲ್ಮಿ, ಲಡ್ಡು.