ಮಂಗಳೂರು: ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕೇವಲ ಒಂದು ಕ್ಷೇತ್ರದಲ್ಲಿ ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿನ ಜ್ಞಾನವನ್ನು ಹೊಂದಿರುವವನೇ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ಹೊಸದಿಗಂತ ಪತ್ರಿಕೆಯ ಮುಖ್ಯ ವರದಿಗಾರ ಗುರುವಪ್ಪ ಎನ್.ಟಿ. ಬಾಳೆಪುಣಿ ಹೇಳಿದರು.
ಅವರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ನಡೆದ ಇನ್ ಡಿಸೈನ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಮುಖ್ಯವಾಗಿ ಸಂವಾಹನ ಕಲೆಯನ್ನು ಹೊಂದಿರಬೇಕು. ಪತ್ರಕರ್ತನಾದವನಿಗೆ ಕೇವಲ ಒಂದು ಕೌಶಲ್ಯ ಮಾತ್ರವಲ್ಲ ಹಲವು ಕೌಶಲ್ಯಗಳನ್ನು ಹೊಂದಿದ್ದರೆ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದರು. ಪತ್ರಕರ್ತನಾದವನು ದೊಡ್ಡ ವ್ಯಕ್ತಿಗಳ ಬಗ್ಗೆ ಬರೆಯುವುದು ಮಾತ್ರವಲ್ಲದೇ, ಸಣ್ಣ ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಬರೆಯುವುದರಿಂದ ಅವರೊಂದಿಗೆ ಪತ್ರಕರ್ತನ ಬೆಳವಣಿಗೆಯೂ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಪಠ್ಯದೊಂದಿಗೆ ಕೌಶಲ್ಯವು ಅಗತ್ಯವಿದ್ದು, ಒಬ್ಬ ವ್ಯಕ್ತಿಯನ್ನು ತಿದ್ದಿತೀಡಿದಾಗ ಉತ್ತಮ ಪತ್ರಕರ್ತನಾಗಲು ಸಾಧ್ಯ. ತರಬೇತಿಯ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆಯಬೇಕು ಎಂದರು.
ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಧರಣೇಶ್ ಕೆ.ಬಿ. ಅವರು ವಿದ್ಯಾರ್ಥಿಗಳಿಗೆ ಇನ್ ಡಿಸೈನ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ. ಶಾಂತಿ ಉಪಸ್ಥಿತರಿದ್ದರು. ಚೇತನಾ ನಾಯಕ್ ಹಾಗೂ ಅಭಿಷೇಕ್ ಹೆಚ್.ಎಸ್. ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿಗಳಾದ ಶುಭಶ್ರೀ ಸ್ವಾಗತಿಸಿ, ಕಾವ್ಯ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.