ಮಂಗಳೂರು: ಮಂಗಳೂರು ರಥಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿರುವ ಸುಮನ ಬೋಳಾರ್ ಇವರು ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಪ್ರೊ. ವಿನಯ್ ರಜತ್ ಇವರ ಮಾರ್ಗದರ್ಶನದಲ್ಲಿ ‘ಹದಿಹರೆಯದ ಕಾಲೇಜು ವಿದ್ಯಾರ್ಥಿಗಳ ನಡವಳಿಕೆಯ ಮೇಲೆ ಸಮಾಲೋಚನೆಯ ಪ್ರಭಾವ ಕುರಿತ ಸಮಾಜಶಾಸ್ತ್ರೀಯ ಅಧ್ಯಯನ’ ಎಂಬ ವಿಷಯದಲ್ಲಿ ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಡಾಕ್ಟರೇಟ್ ಪದವಿಯನ್ನು ನೀಡಿದೆ.
ಇವರು ದಿವಂಗತ ಜಪ್ಪು ಕಡೇಕಾರ್ ಮಾಧವ ಪುತ್ರನ್ ಹಾಗೂ ಬಿ.ಎಸ್.ಎನ್.ಎಲ್. ನಿವೃತ್ತ ಉದ್ಯೋಗಿ ಪದ್ಮಾವತಿ ಪುತ್ರನ್ ಇವರ ಪುತ್ರಿಯಾಗಿದ್ದು, ನಳಿನ್ ಕುಮಾರ್ ಕಟೀಲು ಇವರ ಆಪ್ತ ಕಾರ್ಯದರ್ಶಿಯಾಗಿರುವ ಕೆ. ಸುಧಾಕರ್ ಇವರ ಪತ್ನಿ.
ಮಂಗಳೂರು ವಿವಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು 2009 ರಲ್ಲಿ ಕೆ.ಪಿಎಸ್.ಸ್ಸಿ. ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಕುರ್ನಾಡು ಹಾಗೂ ಕಾವೂರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2014ರ ಕೆ.ಎ.ಎಸ್. ಪರೀಕ್ಷೆಯ ಪೊಲೀಸ್ ಸೇವೆಯಲ್ಲಿ 26ನೇ ರ್ಯಾಂಕ್ ಪಡೆದು ಡಿ.ವೈ.ಎಸ್.ಪಿ. ಹುದ್ದೆ ಹಾಗೂ ಕೆ.ಇ.ಎ. ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆ ಹೀಗೆ ಎರಡೂ ಹುದ್ದೆಗಳಿಗೂ ಅಯ್ಕೆಗೊಂಡ ಇವರು ಶಿಕ್ಷಕ ವೃತ್ತಿಯಲ್ಲಿ ಇವರಿಗಿದ್ದ ಪ್ರೀತಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನೇ ಆಯ್ದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ಅದರ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಉಪಸಮಿತಿಯ ನಿರ್ದೇಶಕರಾಗಿದ್ದಾರೆ. ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಮಾರ್ಗದರ್ಶನ ಹಾಗೂ ಪ್ರಶ್ನೋತ್ತರಗಳ 100ಕ್ಕೂ ಹೆಚ್ಚಿನ ಯೂಟ್ಯೂಬ್ ಸರಣಿಗಳು ಇವರ ‘ಸಮರ್ಥ್ ಭಾರತ್’ ಚಾನಲ್ ನಲ್ಲಿ ಉಚಿತವಾಗಿ ಲಭ್ಯವಿವೆ.