ಕುಂದಾಪುರ: ನಾವು ಮಾಡುವ ಸೇವೆ ಅರ್ಹ ವ್ಯಕ್ತಿಗಳಿಗೆ ತಲುಪಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಯಿಂದ ಜೀವನ ಸಾರ್ಥಕಗೊಳ್ಳುತ್ತದೆ ಎಂದು ರೋಟರಿ ಕ್ಲಬ್ ನ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿಯ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮಾಜ ಸೇವಾ ಚಟುವಟಿಕೆಗಳಲ್ಲಿ ಮಹಿಳೆಯರು ಕೂಡ ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ರೋಟರಿ ಕ್ಲಬ್ ನಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚು ಅವಕಾಶಗಳನ್ನು ಅವರಿಗೆ ನೀಡುತ್ತಿವೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಖ್ಯಾತ ಬರಗಾರ್ತಿ ಮತ್ತು ವಾಗ್ಮಿ ಡಾ. ಶುಭ ಮರವಂತೆ ಮಾತನಾಡಿ, ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯನ್ನು ಹೊಂದಬೇಕು. ಪುರುಷ ಪ್ರಧಾನ ಸಮಾಜದ ಚೌಕಟ್ಟುಗಳಿಂದ ಹೊರಬಂದು ಪರಸ್ಪರ ಗೌರವ ಸಹಕಾರದ ಭಾವನೆಯೊಂದಿಗೆ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಾದ ರಕ್ಷಿತಾ ಆರ್ ಪೂಜಾರಿ, ನಿಶಾ ಬಿ ಪೂಜಾರಿ ಮತ್ತು ಶಶಾಂಕ್ ಶೆಣೈ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯಕ್ರಮ ಮಹಿಳಾ ಸಬಲೀಕರಣದ ಇಬ್ಬರು ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಸರಸ್ವತಿ ವಿದ್ಯಾಲಯದ ಉಚಿತ ಭೋಜನ ನಿಧಿಗೆ ಆರ್ಥಿಕ ಸಹಾಯ ಮತ್ತು ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಯಂತ್ರವನ್ನು ನೀಡಲಾಯಿತು. ರೋಟರಿ ಬುಲೆಟಿನ್ ಗಂಗಾವನ್ನು ಬಿಡುಗಡೆ ಮಾಡಲಾಯಿತು. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡಲಾಯಿತು. ನಾಲ್ಕು ಹೊಸ ರೋಟರಿ ಸದಸ್ಯರನ್ನು ಸ್ವಾಗತಿಸಲಾಯಿತು.
ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ ಶುಭ ಹಾರೈಸಿದರು. ನಿರ್ಗಮನ ಕಾರ್ಯದರ್ಶಿ ನಾರಾಯಣ್ ಈ ನಾಯ್ಕ್ ಸಂಸ್ಥೆಯ ಕಳೆದ ವರ್ಷದ ಚಟುವಟಿಕೆಗಳ ಮಾಹಿತಿ ನೀಡಿದರು. ನಿರ್ಗಮನ ಅಧ್ಯಕ್ಷ ಎಂ.ಜೆ ರಾಜೇಶ್ ಸ್ವಾಗತಿಸಿದರು. ಲಕ್ಷ್ಮಿಕಾಂತ ಮಡಿವಾಳ ಕೊರಳಪಟ್ಟಿ ಧಾರಣೆ ನೆರವೇರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್.ಕೆ ನೂತನ ಪದಾಧಿಕಾರಿಗಳ ಪರಿಚಯವನ್ನು ಮಾಡಿದರು. ಅಕ್ಷತಾ ವಿನಯ ಪ್ರಾರ್ಥಿಸಿದರು. ರಾಮನಾಥ ನಾಯಕ್ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಚಂದ್ರಕಲಾ ತಾಂಡೇಲ ವಂದಿಸಿದರು.