ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಸುರೇಶ್ ರೈ ನೆರವೇರಿಸಿ ಮಾತನಾಡುತ್ತಾ, ಮಾನವನನ್ನು ದಾನವನನ್ನಾಗಿ ಮಾಡುವುದೇ ಮಾದಕ ವ್ಯಸನ. ಇಂತಹ ಮಾದಕ ವ್ಯಸನದಿಂದ ಸಮಾಜ ಮುಕ್ತವಾಗಬೇಕಾದರೆ ಮೊದಲು ತನ್ನನ್ನು ತಾನು ವ್ಯಸನದಿಂದ ದೂರವಿರುವಂತೆ ಮನಸ್ಸನ್ನು ಹತೋಟಿಯಲ್ಲಿಡಬೇಕು. ಇದರಿಂದ ಮಾತ್ರ ಇಡೀ ಸಮಾಜವನ್ನು ಸ್ವಸ್ಥ ಸಮಾಜವನ್ನಾಗಿಸಬಹುದು ಎಂದು ಹೇಳಿದರು.
ದುಶ್ಚಟ ಮುಕ್ತ ಸಮಾಜವೇ ನಮ್ಮ ದೇಶದ ಅಭಿವೃದ್ಧಿಗೆ ಮೂಲ ಮಂತ್ರ. ಈ ಕನಸನ್ನು ಮಹಾತ್ಮ ಗಾಂಧೀಜಿಯವರು ಕಂಡರು. ಆದರೂ ಸ್ವಾತಂತ್ರ ದೊರೆತು ಇಷ್ಟು ವರ್ಷವಾದರೂ ನಾವುಗಳು ದುಶ್ಚಟ ಮುಕ್ತ, ಮದ್ಯವ್ಯಸನಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ ವಿದ್ಯಾರ್ಥಿದೆಶೆಯಲ್ಲಿಯೇ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ. ಸುರೇಶ್ ರೈ ಹೇಳಿದರು.
ಉಡುಪಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ವಕ್ತಿ ನವೀನ್ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾದಾಗ ಮಾತ್ರ ಕಲಿಕೆಯತ್ತ ಆಸಕ್ತಿ ವಹಿಸಬಹುದು ಎಂದು ಸಲಹೆ ನೀಡಿದರು. ಯುವಜನತೆ ದೇಶದ ಶಕ್ತಿಯಾಗಿದ್ದು, ಒಳ್ಳೆಯ ಮಾರ್ಗದರ್ಶನದಲ್ಲಿ ವಿದ್ಯಾವಂತರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಮಲ್ಪೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ ಸಾಲಿಯಾನ್ ಮತ್ತು ಆಶಾಲತಾ ಉಪಸ್ಥಿತರಿದ್ದರು.