ಮಂಗಳೂರು: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕರ್ನಾಟಕ ಇವರ ಪ್ರಾಯೋಜಕತ್ವದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಸಂಘದ ಹಾಗೂ ಲಲಿತಕಲಾ ಸಂಘದ ಸಹಯೋಗದಲ್ಲಿ ಅಂತರ್ ಕಾಲೇಜು ಮಟ್ಟದ ವರ್ಣ ಚಿತ್ರಕಲಾ ಸ್ಪರ್ಧೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಮ್ ವಹಿಸಿದ್ದರು. ಶಕ್ತಿಯ ಸಂರಕ್ಷಣೆ ಮತ್ತು ಶಕ್ತಿಯ ಕ್ಷಮತೆ ಎಂಬ ವಿಷಯವನ್ನಾಧರಿಸಿ ಸ್ಪರ್ಧೆ ನಡೆಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಆನಂತ ಪದ್ಮನಾಭ ರಾವ್ ಹಾಗೂ ಜಯಶ್ರೀ ಶರ್ಮ ಅವರು ಸ್ಪರ್ಧಾಳುಗಳಿಗೆ ವರ್ಣಚಿತ್ರ ಬಿಡಿಸುವಾಗ ಅಳವಡಿಸಿಕೊಳ್ಳಬೇಕಾದ ಸೂಕ್ಷ್ಮತೆಗಳ ಬಗ್ಗೆ ತಿಳಿಸಿದರು. ಯುವಜನತೆ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿಯೂ ಯೋಚಿಸಬೇಕಿದೆಯೆಂದು ನುಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿ ಶಿವಮೊಗ್ಗದ ಜಂಟಿ ನಿರ್ದೇಶಕರಾಗಿರುವ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಅವರು ಶುಭ ಹಾರೈಸಿದರು. ಕಾಲೇಜಿನ ವಿಜ್ಞಾನ ಸಂಘದ ಸಂಯೋಜಕರಾದ ಡಾ. ಸುಧಾಕರನ್ ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಲಲಿತಕಲಾ ಸಂಘದ ಸಂಯೋಜಕರಾದ ಡಾ. ಕೃಷ್ಣಪ್ರಭ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜಕರಾದ ಡಾ. ವಸಂತಿ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಲಿತಾಂಶ: ಅಂತರ್ ಕಾಲೇಜು ಚಿತ್ರಕಲಾ ಸ್ಪರ್ಧೆಯಲ್ಲಿ 15 ಕಾಲೇಜಿನ ಒಟ್ಟು 26 ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಶರತ್, ದ್ವಿತೀಯ ಸ್ಥಾನವನ್ನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯುತ್ತ) ರಾಹುಲ್ ರಮೇಶ್, ತೃತೀಯ ಸ್ಥಾನವನ್ನು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಶ್ವೇತನಾ, ಮತ್ತು ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತೀಕ್ಷಾ ಇವರು ಪಡೆದುಕೊಂಡಿರುತ್ತಾರೆ.