Friday, September 20, 2024
Friday, September 20, 2024

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

Date:

ಮರ ಚಿತ್ರಕಥಾ ಮತ್ತು ಟಿಂಕಲ್ ಮ್ಯಾಗಝೀನ್ ಜನಕ ಎಲ್ಲರ ಭಾವಕೋಶಗಳನ್ನು ಬಾಲ್ಯದಲ್ಲಿ ಅತ್ಯಂತ ಶ್ರೀಮಂತ ಮಾಡಿರುವ ಅಂಕಲ್ ಪೈ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ! ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವುಗಳು ‘ಅಮರ ಚಿತ್ರಕಥಾ’ ಮತ್ತು ‘ಟಿಂಕಲ್’. ಅವುಗಳು ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತ ರಮ್ಯ ಕಲ್ಪನಾಲೋಕವನ್ನು ಸೃಷ್ಟಿ ಮಾಡಿದ ಸರಣಿ ಮ್ಯಾಗಝೀನಗಳು!

ಯಾರಿವರು ಅಂಕಲ್ ಪೈ?
ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡದಾದ ಪ್ರಮಾಣದಲ್ಲಿ ಬೆಳೆಸಿದ ಕೀರ್ತಿ ಅನಂತ್ ಪೈ ಅವರದ್ದು. ತಮ್ಮನ್ನು ತಾವೇ ‘ಅಂಕಲ್ ಪೈ’ಎಂದು ಕರೆದುಕೊಂಡವರು. ಅವರು ನನ್ನೂರಾದ ಕಾರ್ಕಳದಲ್ಲಿ ಹುಟ್ಟಿದವರು ಮತ್ತು ತಮ್ಮ ಬಾಲ್ಯವನ್ನು ಕಳೆದವರು ಎನ್ನುವುದು ನನಗೆ ಹೆಮ್ಮೆ! ಅವರ ಮಾತೃಭಾಷೆಯು ಕೊಂಕಣಿ. ಹುಟ್ಟಿದ ಎರಡನೆಯ ವರ್ಷಕ್ಕೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯಿಂದ ವಂಚಿತ ಆದರು. ಹಾಗೆ ಮುಂದೆ ಅವರ ಅಜ್ಜ ಅವರನ್ನು ಸಾಕುತ್ತಾರೆ. ಮುಂದೆ ಅವರು ಮುಂಬೈಗೆ ಬಂದು ಮಹೀಮ್ ನಗರದ ಓರಿಯೆಂಟ್ ಶಾಲೆಯಲ್ಲಿ ಓದುತ್ತಾರೆ. ಮುಂಬೈ ವಿವಿಯಿಂದ ವಿಜ್ಞಾನದಲ್ಲಿ ಎರಡು ಪದವಿ ಪಡೆಯುತ್ತಾರೆ.

ಮುಂಬೈಯಲ್ಲಿ ಪತ್ರಿಕಾ ಪ್ರಪಂಚಕ್ಕೆ ಪ್ರವೇಶ!
ನಂತರ ಸ್ವಲ್ಪ ದಿನ ಮುಂಬೈಯಲ್ಲಿ ‘ಮಾನವ್’ ಹೆಸರಿನ ಒಂದು ಮ್ಯಾಗಝೀನ್ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಮುಂದೆ ದೇಶದಲ್ಲಿ ಹೆಸರಾಂತ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಅಧಿಕಾರಿಯಾಗಿ ನೇಮಕ ಆಗುತ್ತಾರೆ. ಆಗಲೇ ‘ಇಂದ್ರಜಾಲ ಕಾಮಿಕ್ಸ್ ಸರಣಿ’ಯ ಎರಡು ಪುಸ್ತಕಗಳನ್ನು ಅವರು ಮುದ್ರಿಸಿ ಹೊರತರುತ್ತಾರೆ. ಅವೆಂದರೆ ಫ್ಯಾಂಟಮ್ ಮತ್ತು ಮಾಂಡ್ರೆಕ್! ಅವುಗಳು ಜನಪ್ರಿಯವಾಗಿ ಅಂಕಲ್ ಪೈ ಅವರಿಗೆ ತುಂಬಾನೆ ಹೆಸರು ಬಂತು. ಆಗ ಅವರ ಬದುಕಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತು!

ಅಮರ ಚಿತ್ರ ಕಥಾ ಹುಟ್ಟಿದ್ದು ಹೀಗೆ!
1967ರ ಹೊತ್ತಿಗೆ ಒಂದು ದಿನ ಅವರು ದೂರದರ್ಶನದಲ್ಲಿ ಒಂದು ರಸಪ್ರಶ್ನೆ ಕಾರ್ಯಕ್ರಮವನ್ನು ಬಹಳ ಆಸಕ್ತಿಯಿಂದ ವೀಕ್ಷಣೆ ಮಾಡುತಿದ್ದರು. ವಿವಿಧ ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದ ಕಾರ್ಯಕ್ರಮ ಅದು. ಆ ಮಕ್ಕಳು ಗ್ರೀಕ್ ಪುರಾಣಗಳ ಪ್ರಶ್ನೆಗಳು ಬಂದಾಗ ತಟ್ಟನೆ ಉತ್ತರಗಳನ್ನು ಹೇಳುತ್ತಿದ್ದರು.ಆದರೆ ನಮ್ಮದೆ ರಾಷ್ಟ್ರದ ರಾಮಾಯಣ, ಮಹಾಭಾರತದ ಪ್ರಶ್ನೆಗಳು ಬಂದಾಗ ಬಹಳ ಕಷ್ಟ ಪಡುತ್ತಿದ್ದರು. “ರಾಮನ ತಾಯಿ ಯಾರು?” ಎಂಬ ಸುಲಭವಾದ ಪ್ರಶ್ನೆಗೆ ಆ ಮಕ್ಕಳಿಂದ ಉತ್ತರ ಬರಲೇ ಇಲ್ಲ! ಅಯೋಧ್ಯಾ ನಗರ ಯಾವ ನದಿಯ ದಡದಲ್ಲಿ ಇದೆ ಎಂಬ ಪ್ರಶ್ನೆಗೆ ಮಕ್ಕಳು ಮತ್ತೆ ದಡಬಡ ಆದರು! ಅನಂತ ಪೈ ಅವರಿಗೆ ಇದರಿಂದ ತುಂಬಾ ನೋವಾಯಿತು. ತಾನು ಮುಂದೆ ಏನು ಮಾಡಬೇಕಾಗಿದೆ? ಎಂದು ತಕ್ಷಣ ಅವರಿಗೆ ಅರ್ಥವಾಯಿತು! ಅವರು ಟೈಮ್ಸ್ ನೌಕರಿಗೆ ರಾಜೀನಾಮೆ ಕೊಟ್ಟು ಹೊರಬಂದರು!

ಸಾಂಸ್ಕೃತಿಕವಾಗಿ ಶ್ರೀಮಂತವಾದ ಸಂಚಿಕೆಗಳು!
ಭಾರತದ ಅತ್ಯಂತ ಶ್ರೀಮಂತವಾದ ಪುರಾಣ, ಇತಿಹಾಸ, ಜನಪದ, ಸಂಸ್ಕೃತಿಗಳ ಕಥೆಗಳನ್ನು ಅಕ್ಷರಗಳ ಮೂಲಕ ಹೇಳುವುದಕ್ಕಿಂತ ಬಣ್ಣದ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳಿಗೆ ಸುಲಭವಾಗಿ ಅರ್ಥ ಆಗುತ್ತದೆ ಎಂದು ಅವರಿಗೆ ಮನವರಿಕೆ ಆಗಿತ್ತು. ಅದನ್ನು ಆಧಾರವಾಗಿ ಅವರು ಆರಂಭ ಮಾಡಿದ ಕಥಾ ಸರಣಿಯೆ ‘ಅಮರ ಚಿತ್ರ ಕಥಾ! ‘
ಆರಂಭದಲ್ಲಿ ನೂರಾರು ಸವಾಲುಗಳು!

ಅದಕ್ಕೆ ಪ್ರಕಾಶಕರನ್ನು ಹುಡುಕುವುದು ಅವರಿಗೆ ಬಹಳ ಕಷ್ಟ ಆಯಿತು. ಯಾಕೆಂದರೆ ಭಾರತದಲ್ಲಿ ಅಂತಹ ಸರಣಿಯು ಅದುವರೆಗೆ ಜನಪ್ರಿಯ ಆಗಿರಲಿಲ್ಲ. (ಕನ್ನಡದಲ್ಲಿ 1965ರ ಹೊತ್ತಿಗೆ ಅನಂತರಾಮು ಎಂಬವರು ಹತ್ತು ಶೀರ್ಷಿಕೆಯ ಅಮರ ಚಿತ್ರ ಕಥಾಪುಸ್ತಕಗಳನ್ನು ಪ್ರಕಾಶನ ಮಾಡಿದ್ದರು ಎಂದು ದಾಖಲೆಗಳು ಹೇಳುತ್ತವೆ). ಅದನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಪೈಯವರು ಅದನ್ನು ಇನ್ನಷ್ಟು ಅದ್ಭುತವಾಗಿ ಮಾಡಲು ಹೊರಟರು.

ಕೊನೆಗೂ ಪ್ರಕಾಶಕರು ದೊರೆತರು!
ಜಿ. ಎಲ್. ಮೀರ್ಚಾಂದಾನಿ ಎಂಬ ಪ್ರಕಾಶಕರು ಅವರಿಗೆ ನೆರವು ನೀಡಲು ಮುಂದೆ ಬಂದರು. ಆರಂಭದಲ್ಲಿ ಸ್ವತಃ ಪೈಯವರು ಕಥೆ ಮತ್ತು ಚಿತ್ರ ಎರಡನ್ನೂ ಬರೆದು ಮುದ್ರಿಸ ಬೇಕಾಯಿತು. ಮುಂದೆ ಇತರ ಲೇಖಕರನ್ನು ಮತ್ತು ಚಿತ್ರ ಕಲಾವಿದರನ್ನು ಒಳಗೊಂಡು ‘ರಂಗ ರೇಲಾ’ ಎಂಬ ಸಿಂಡಿಕೇಟನ್ನು ಅವರು ಸ್ಥಾಪಿಸಿದರು. ಭಾರತದ ಅತೀ ಶ್ರೇಷ್ಟವಾದ ಸಾಂಸ್ಕೃತಿಕ ಅಸ್ಮಿತೆಗಳಾದ ರಾಮಾಯಣ, ಮಹಾಭಾರತ, ಭಾಗವತ, ಹನುಮಾನ್, ಕೃಷ್ಣನ ಬಾಲಲೀಲೆಗಳು, ತಾನಸೇನ, ಅಕ್ಬರ್ ಮತ್ತು ಬೀರಬಲ್, ತೆನಾಲಿ ರಾಮ, ಪಂಚತಂತ್ರದ ಕಥೆಗಳು, ಶಿವಾಜಿ, ರಾಣಾ ಪ್ರತಾಪ, ತುಳಸಿ ದಾಸ, ಮೀರಾ ಬಾಯಿ, ಕಾಳಿದಾಸ, ಏಸು ಕ್ರಿಸ್ತ, ಚಾಣಕ್ಯ, ಚಂದ್ರಗುಪ್ತ, ಅಶೋಕ…. ಮೊದಲಾದವರ ಬದುಕಿನ ಕಥೆಗಳನ್ನು ಬಣ್ಣ ಬಣ್ಣದ ರೇಖಾ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳ ಖುಷಿಯು ಎಷ್ಟು ಮತ್ತು ಹೇಗಿರಬಹುದು! ಊಹೆ ಮಾಡಿ.

ಭಾರತದಲ್ಲಿ ಆಯ್ತು ಕಾಮಿಕ್ಸ್ ಕ್ರಾಂತಿ!
‘ಅಮರ ಚಿತ್ರ ಕಥಾ’ ಸಂಚಿಕೆಗಳು ನಮ್ಮ ಭಾರತದಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿದವು. ತಿಂಗಳಿಗೆ ಒಂದು, ಕೆಲವೊಮ್ಮೆ ಎರಡು, ಕೆಲವೊಮ್ಮೆ ಮೂರು ‘ಅಮರ ಚಿತ್ರ ಕಥಾ’ ಪುಸ್ತಕಗಳು ಹೊರಬರುತ್ತಿದ್ದವು. 70-90ರ ದಶಕದಲ್ಲಿ ಪ್ರತೀ ತಿಂಗಳು ಸರಾಸರಿ 7,00,000 ಪುಸ್ತಕಗಳು ಮಾರಾಟ ಆಗುತ್ತಿದ್ದವು. ಇದೊಂದು ಮಹಾನ್ ಐತಿಹಾಸಿಕ ದಾಖಲೆ! ಇದುವರೆಗೆ 500ಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆಗಳ ಅಮರ ಚಿತ್ರ ಕಥಾ ಪುಸ್ತಕಗಳು ಮುದ್ರಿತವಾಗಿ ಹೊರಬಂದಿದ್ದು ಒಟ್ಟು ಎಂಬತ್ತಾರು ಮಿಲಿಯನ್ ಓದುಗ ವರ್ಗವನ್ನು ತಲುಪಿವೆ! ಅಮರ ಚಿತ್ರಕಥಾ ಸಂಚಿಕೆಗಳು ಇಂಗ್ಲಿಷ್, ಹಿಂದಿ ಮತ್ತು ಭಾರತದ ಎಲ್ಲ ಭಾಷೆಗಳಲ್ಲಿಯೂ ಬರುತ್ತಿದ್ದವು. ಅದರ ಲೇಖಕರು, ಸಂಪಾದಕರು ಮತ್ತು ಪ್ರಕಾಶಕರು ಎಲ್ಲವೂ ಆಗಿ ಅಂಕಲ್ ಪೈಯವರು ಭಾರೀ ಜನಪ್ರಿಯತೆ ಪಡೆದರು.

ಸೃಜನಶೀಲತೆಗೆ ಇನ್ನೊಂದು ಹೆಸರೇ ಅಂಕಲ್ ಪೈ! ತುಂಬಾನೇ ಕ್ರಿಯಾಶೀಲರಾಗಿ ಮತ್ತು ಸೃಜನಶೀಲರಾಗಿ ಯೋಚನೆ ಮಾಡುವ ಅಂಕಲ್ ಪೈ ಅವರು ಸುಮ್ಮನೆ ಕೂರುವವರು ಅಲ್ಲವೇ ಅಲ್ಲ! I am really astonished by his Creativity, Comic sense, Enthusiasm and Determination!
‘ಅಮರ ಚಿತ್ರ ಕಥಾ’ ಸರಣಿಯು ಒಂದು ಹಂತದ ಕೀರ್ತಿ ಹಾಗೂ ಜನಪ್ರಿಯತೆಯ ಉತ್ತುಂಗವನ್ನು ತಲುಪಿದ ಸಂದರ್ಭದಲ್ಲಿ ಅವರು ಇನ್ನೊಂದು ಭಾರೀ ಸಾಹಸಕ್ಕೆ ಕೈ ಹಾಕಿದರು.

ಟಿಂಕಲ್ ಮ್ಯಾಗಝೀನ್ ಬಂತು ದಾರಿ ಬಿಡಿ!
ಸಣ್ಣ ಸಣ್ಣ ಮಕ್ಕಳು ಮತ್ತು ಹದಿಹರೆಯದ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಟಿಂಕಲ್ (TINKLE) ಎಂಬ ಪಾಕ್ಷಿಕ ಪತ್ರಿಕೆಯನ್ನು ಅಂಕಲ್ ಪೈ ಅವರೇ ಮುಂದೆ ನಿಂತು ಆರಂಭ ಮಾಡಿದರು. ಮಕ್ಕಳಿಗೆ ಸಹಜವಾಗಿ ಇಷ್ಟವಾಗುವ ವಿಶೇಷ ಆಟಗಳ ಜೊತೆಗೆ ಪದಬಂಧ, ಸುಡೊಕು, ಕ್ವಿಜ್, ಕಾಲ್ಪನಿಕ ಕಥೆಗಳು, ಸಾಮಾನ್ಯ ಜ್ಞಾನ, ಕಾರ್ಟೂನ್, ರಂಜಕವಾದ ಮತ್ತು ಅತ್ಯಾಕರ್ಷಕವಾದ ಬಣ್ಣದ ಚಿತ್ರಗಳಿಂದ TINKLE ಸಂಚಿಕೆಗಳು ಅತ್ಯಂತ ಶ್ರೀಮಂತವಾಗಿ ಹೊರಬಂದು ಮಕ್ಕಳ ಕೈ ಸೇರಿದವು.

ನನ್ನ ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ಒಂದು ಸಂಚಿಕೆ ಕೂಡ ಬಿಡದೆ ನಾನು ಓದಿ ಮುಗಿಸಿದ ಪುಸ್ತಕಗಳು ಎಂದರೆ TINKLE ಮಾತ್ರ! ಆ ಪುಸ್ತಕಗಳು ಈಗಲೂ ಜನಪ್ರಿಯ ಆಗಿದ್ದು ಮೂರು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಓದುಗರನ್ನು ತಲುಪುತ್ತಿದೆ! ಇದುವರೆಗೆ 700 ಸಂಚಿಕೆಗಳನ್ನು ಪೂರೈಸಿದೆ! ಇದು ಇನ್ನೊಂದು ಐತಿಹಾಸಿಕ ದಾಖಲೆ!
ಚಿಂಪು, ರಾಮು ಮತ್ತು ಶಾಮು, ಕಪೀಶ ಇತ್ಯಾದಿ!

ಮುಂದೆ ಭಾರತದ ಎಲ್ಲ ಭಾಷೆಗಳ ಪತ್ರಿಕೆಗಳಲ್ಲಿ ಚಿಂಪು ಕಾಮಿಕ್ಸ್, ರಾಮು ಮತ್ತು ಶಾಮು, ಕಪೀಶ, ಲಿಟಲ್ ರಾಜಿ, ಫ್ಯಾಕ್ಟ್ ಫ್ಯಾಕ್ಟರಿ……ಹೀಗೆ ನೂರಾರು ಸರಣಿಗಳನ್ನುಅವರು ಕ್ರಿಯೇಟ್ ಮಾಡಿದರು. ಆಗ ಉದಯವಾಣಿ ಪತ್ರಿಕೆಯ ರವಿವಾರಗಳ ಆವೃತ್ತಿಯಲ್ಲಿ ವರ್ಷಾನುಗಟ್ಟಲೆ ಹರಿದು ಬರುತ್ತಿದ್ದ ‘ರಾಮು ಮತ್ತು ಶಾಮು’ ಕಾರ್ಟೂನನ ವಿಶೇಷ ಸಂಚಿಕೆಗಳಿಗೆ ನಾವೆಲ್ಲರೂ ಕಾಯುತ್ತಿದ್ದ ದಿನಗಳು ಇದ್ದವು! ಇವುಗಳ ಒಂದಲ್ಲ ಒಂದು ಸರಣಿಯನ್ನು ನೀವು ಖಂಡಿತ ಗಮನಿಸಿರುತ್ತೀರಿ ಎನ್ನುವುದು ನನ್ನ ನಂಬಿಕೆ.

ಅಂಕಲ್ ಪೈ ಅವರ ಸಂಪೂರ್ಣ ಬದುಕು ಮಕ್ಕಳಿಗೆ ಮತ್ತು ಮಕ್ಕಳಿಗಾಗಿ!
ಈ ಸಾಹಸಗಳ ಜೊತೆಗೆ ಹಲವು ವಿಕಸನದ ಪುಸ್ತಕಗಳು, ವಿಡಿಯೋ ಫಿಲಂಗಳು, ಅನಿಮೇಟೆಡ್ ಫಿಲಂಗಳು ಮತ್ತು ಆಡಿಯೋ ಪುಸ್ತಕಗಳನ್ನು ಅವರು ಹೊರತಂದು ಮಕ್ಕಳ ಮನೋವಿಕಾಸಕ್ಕೆ ಅದ್ಭುತ ಕೊಡುಗೆಯನ್ನು ನೀಡಿದರು! 82 ವರ್ಷ ಬದುಕಿದ್ದ ಅಂಕಲ್ ಪೈ ಅವರು ನಿಧನರಾದಾಗ (2011) ಗೂಗಲ್ ಸಂಸ್ಥೆಯು ಕಾಮಿಕ್ಸ್ ಡೂಡಲ್ ಮೂಲಕ ಅವರಿಗೆ ಶ್ರದ್ಧಾಂಜಲಿ ನೀಡಿತು.

ಭಾರತದ ವಾಲ್ಟ್ ಡಿಸ್ನಿ ಎಂಬ ಕೀರ್ತಿ!
ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಶ್ರೇಷ್ಟ ಕೆಲಸಗಳನ್ನು ಮುಗಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎನ್ನುವುದು ನನಗೆ ಬಹಳ ಕುತೂಹಲದ ಸಂಗತಿ! 1997ರ ವರ್ಷದಲ್ಲಿ ಡಾಕ್ಟರ್ ಟಿ ಎಮ್ ಎ ಪೈ ಅವರ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಲು ನಮ್ಮ ಅಂಕಲ್ ಪೈ ಅವರು ಮಣಿಪಾಲಕ್ಕೆ ಬಂದಿದ್ದರು. ಆ ದಿನ “ಮಕ್ಕಳಿಗೆ ಇಷ್ಟೊಂದು ಪ್ರೀತಿಯನ್ನು ಕೊಡಲು ನಿಮಗೆ ಹೇಗೆ ಸರ್ ಸಾಧ್ಯವಾಯಿತು?” ಎಂದು ಯಾರೋ ಅವರನ್ನು ಪ್ರಶ್ನೆ ಕೇಳಿದ್ದರು. ಆಗ ಅವರು ನೀಡಿದ ಉತ್ತರವು ಅತ್ಯಂತ ಮಾರ್ಮಿಕವಾಗಿತ್ತು.

“ನನಗೆ ಮಕ್ಕಳಿರಲಿಲ್ಲ. ಆ ನೋವುಗಳೆ ನನ್ನಿಂದ ಇಷ್ಟೊಂದು ಕೆಲಸಗಳನ್ನು ಮಾಡಿಸಿದವು!”ಎಂದಿದ್ದರು. ನಮ್ಮ ಕಾರ್ಕಳದ ಅಂಕಲ್ ಪೈ ಅವರು ಭಾರತದ ಕಾಮಿಕ್ಸ್ ಪ್ರಪಂಚದ ನಿಜವಾದ ಧ್ರುವ ತಾರೆ ಎಂದು ನನಗೆ ಖಂಡಿತ ಅನ್ನಿಸುತ್ತದೆ.

ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!